ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಮುಂಗಾರು ಮಳೆಯು ಬಿರುಸಾಗಿ ಸುರಿದ್ದರಿಂದ ನಗರದ ಜನತೆ ಪುಳಕಗೊಂಡರು. ಸಂಚಾರ ದಟ್ಟಣೆ ಹೆಚ್ಚಾದರೂ ಬಿರು ಬಿಸಿಲಿನಿಂದ ತತ್ತರಿಸಿದ್ದ ಜನತೆ ಮಳೆ ಕಂಡು ಸಂಭ್ರಮಿಸಿದರು.
ಕಬ್ಬನ್ ಉದ್ಯಾನ ರಸ್ತೆ, ಬಸವೇಶ್ವರ ವೃತ್ತ, ಟ್ರಿನಿಟಿ ವೃತ್ತ, ಫ್ರೇಜರ್ ಟೌನ್, ಆಡುಗೋಡಿ, ಹೊಸೂರು ರಸ್ತೆ ಸೇರಿದಂತೆ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ಕೆಲ ಕಾಲ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ನಗರದಲ್ಲಿ ಗರಿಷ್ಠ 3.2 ಮಿ.ಮೀ. ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ 28.9 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದ ವಿವಿಧ ರಸ್ತೆಗಳಲ್ಲಿ ಮಳೆ ನೀರು ಹರಿದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಜೋರಾಗಿ ಗಾಳಿ ಬೀಸಿದ್ದರಿಂದ ನಂದಿದುರ್ಗ ರಸ್ತೆಯಲ್ಲಿರುವ ಮರವೊಂದರ ಕೊಂಬೆ ಮುರಿದು ಬಿದ್ದಿತ್ತು. ಬಳಿಕ ಪಾಲಿಕೆ ಸಿಬ್ಬಂದಿ ಇದನ್ನು ತೆರವುಗೊಳಿಸಿದರು. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.