ADVERTISEMENT

‘ಮುಂದಿನ ಜನ್ಮದಲ್ಲಿ ದನವಾಗಿ ಹುಟ್ಟುವೆ’

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ,  ಎನ್‌.ವಿ. ನರಸಿಂಹಯ್ಯ, ಪ್ರಾಧ್ಯಾಪಕ ಚಂದ್ರಪ್ಪ, ಜಿ.ಕೆ. ಗೋವಿಂದರಾವ್‌, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಅವರು ಪ್ರೊ. ಬಿ. ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. –ಪ್ರಜಾವಾಣಿ ಚಿತ್ರ
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ, ಎನ್‌.ವಿ. ನರಸಿಂಹಯ್ಯ, ಪ್ರಾಧ್ಯಾಪಕ ಚಂದ್ರಪ್ಪ, ಜಿ.ಕೆ. ಗೋವಿಂದರಾವ್‌, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಅವರು ಪ್ರೊ. ಬಿ. ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನರ ಕಾಳಜಿಗಿಂತ, ದನಗಳ ಕಾಳಜಿಯೇ ಹೆಚ್ಚಾಗಿರುವ ಈ ದೇಶದಲ್ಲಿ ಗೋವಾಗಿಯೇ ಹುಟ್ಟುವುದು ಲೇಸು. ನಾನೂ ಸಹ ಮುಂದಿನ ಜನ್ಮದಲ್ಲಿ ದನವಾಗಿ ಹುಟ್ಟುತ್ತೇನೆ’ ಎಂದು ವಿಚಾರವಾದಿ ಜಿ.ಕೆ. ಗೋವಿಂದರಾವ್‌ ಟೀಕಿಸಿದರು.

ಪ್ರೊ.ಬಿ. ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಉಳಿಸಿ–ಕೋಮುವಾದ ಅಳಿಸಿ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದನ ಕೊಂಡವರು ಜೈಲಲ್ಲಿ ಕೊಳೆಯು­ತ್ತಾರೆ, ಜನ ಕೊಂಡವರು ಪ್ರಧಾನಿ ಆಗುತ್ತಾರೆ ಎಂಬ ಉರಿಲಿಂಗ ಪೆದ್ದ ಸ್ವಾಮಿ ಹೇಳಿದ ಮಾತನ್ನು ಇತರೆ ಸಾಮಾನ್ಯ ಜನ ಆಡಿದ್ದಿದ್ದರೆ ಅವರ ಗತಿ ಏನಾಗುತ್ತಿತ್ತೊ ಏನೋ. ಸ್ವಾಮೀಜಿ ಹಾಕಿರುವ ಕೇಸರಿಯೇ ಅವರನ್ನು ಕಾಪಾಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಹಿಂದೆ ಬ್ರಾಹ್ಮಣ ಮುನಿಗಳು ವಿಶೇಷ ಭೋಜನದ ಹೆಸರಿನಲ್ಲಿ ಕರುವಿನ ಮಾಂಸ (ಗೋಜ್ಞಾನ) ತಿನ್ನುತ್ತಿದ್ದರು ಎಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಆಗ ಬುದ್ಧ ಮತ್ತು ಜೈನ ಧರ್ಮಗಳು ಹುಟ್ಟಿಕೊಂಡವು’ ಎಂದರು.

‘ದಲಿತರ ಮನೆಗೆ ಹೋಗಿ ಊಟ ಮಾಡುತ್ತೇವೆ ಎಂದು ಹೋಟೆಲ್‌ ಊಟ ತರಿಸಿಕೊಂಡು ತಿನ್ನುವ ರಾಜಕಾರಣಿಗಳ ಬೂಟಾಟಿಕೆಗೆ ದಲಿತರು ಅವಕಾಶ ಮಾಡಿಕೊಡಬಾರದು’ ಎಂದು ತಿಳಿಸಿದರು.

‘ಪಕ್ಕದಲ್ಲಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಂದರೆ ಹಿಂದೂಗಳೆಂದು ಗಟ್ಟಿ ದನಿಯಲ್ಲಿ ಹೇಳುತ್ತಾರೆ. ಅದೇ ಒಬ್ಬ ದಲಿತ ಬಂದರೆ ನಾವು ಬ್ರಾಹ್ಮಣರು ಎನ್ನುವ ಜಾತಿ ಧೋರಣೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ದೇವರಾಜ ಅರಸು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಎನ್‌.ವಿ. ನರಸಿಂಹಯ್ಯ, ‘ಹಿಂದೂ ಎನ್ನುವುದು ಯಾವುದೇ ಧರ್ಮ ಸೂಚಕವಲ್ಲ. ಸಿಂಧೂ ನದಿಯ ದಂಡೆ ಮೇಲೆ ವಾಸಿಸುವವರು ಹಿಂದೂಗಳು. ಆದರೆ, ಅದನ್ನೊಂದು ಧರ್ಮ ಎಂದು ಬಿಂಬಿಸಿ ಕೋಮುವಾದಬೆಳೆಸುವ ಕೆಲಸ ಈಗ ಹೆಚ್ಚಾಗುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.