ADVERTISEMENT

ಮುಂದುವರಿದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:55 IST
Last Updated 10 ಜುಲೈ 2013, 19:55 IST
ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕನೊಬ್ಬ ಕೆಲಸವಿಲ್ಲದೆ ಲಾರಿಯ ಮೇಲೆಯೇ ನಿದ್ರಿಸುತ್ತಿದ್ದ ದೃಶ್ಯ ಬೈಯಪ್ಪನಹಳ್ಳಿ ಬುಧವಾರ ಕಂಡು ಬಂತು 	 - ಪ್ರಜಾವಾಣಿ ಚಿತ್ರ
ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕನೊಬ್ಬ ಕೆಲಸವಿಲ್ಲದೆ ಲಾರಿಯ ಮೇಲೆಯೇ ನಿದ್ರಿಸುತ್ತಿದ್ದ ದೃಶ್ಯ ಬೈಯಪ್ಪನಹಳ್ಳಿ ಬುಧವಾರ ಕಂಡು ಬಂತು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾನೂನುಬದ್ಧವಾಗಿ ಮರಳು ಸಾಗಿಸಲು ಅನುಕೂಲವಾಗುವಂತೆ ಸಮಗ್ರ ಮರಳು ನೀತಿ ರೂಪಿಸಬೇಕೆಂದು ಒತ್ತಾಯಿಸಿ ಭಾನುವಾರದಿಂದ (ಜುಲೈ 7) ಲಾರಿ ಮಾಲೀಕರು ರಾಜ್ಯದೆಲ್ಲೆಡೆ ಮರಳು ಸಾಗಣೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ.

ಮರಳು ಸಾಗಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಲಾರಿಗಳು ಬನಶಂಕರಿ, ನಾಯಂಡಹಳ್ಳಿ, ಕೊಟ್ಟಿಗೆಪಾಳ್ಯ, ಕೆಂಗೇರಿ, ಮಾಗಡಿ ರಸ್ತೆ, ಕೆಂಗುಂಟೆ, ಯಲಹಂಕ, ಹೆಬ್ಬಾಳ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಮತ್ತಿತರ ನಿಲ್ದಾಣಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
`ಮುಷ್ಕರದ ಪರಿಣಾಮ ಮರಳಿನ ಅಭಾವ ಸೃಷ್ಟಿಯಾಗಿದ್ದು, ಮರಳಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಅಲ್ಲದೇ, ಲಾರಿಗಳು ಸೇವೆ ಸ್ಥಗಿತಗೊಂಡಿರುವುದರಿಂದ ಕಟ್ಟಡದ ಮಾಲೀಕರು ಟ್ರ್ಯಾಕ್ಟರ್‌ಗಳ ಮೂಲಕ ಮರಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಪರಸ್ಥಿತಿಯ ಲಾಭ ಪಡೆಯುತ್ತಿರುವ ಟ್ರ್ಯಾಕ್ಟರ್ ಚಾಲಕರು, ಲೋಡ್ ಮರಳಿಗೆ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಮುಷ್ಕರ ಹೀಗೆ ಮುಂದುವರಿದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ' ಎಂದು ಸಿಐಟಿಯು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ಎನ್.ಪಾರ್ಥೀಬನ್ ತಿಳಿಸಿದರು.

ಮುಷ್ಕರದ ನಾಲ್ಕನೇ ದಿನದ ಬೆಳವಣಿಗೆ ಬಗ್ಗೆ `ಪ್ರಜಾವಾಣಿ'ಗೆ ವಿವರಿಸಿದ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, `ಕೆ.ಆರ್.ಪುರ, ಭಟ್ಟರಹಳ್ಳಿ, ಹೊಸಕೋಟೆ ಸೇರಿದಂತೆ ವಿವಿಧೆಡೆ ಲಾರಿ ಮಾಲೀಕರೊಂದಿಗೆ ಸಭೆ ನಡೆಸಲಾಯಿತು. ಸರ್ಕಾರ ಒಂದು ವಾರದೊಳಗೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ, ಮರುದಿನದಿಂದಲೇ ಜಲ್ಲಿ, ಸಿಮೆಂಟ್, ಇಟ್ಟಿಗೆ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಇದರಿಂದ ಮೇಸ್ತ್ರಿಗಳು, ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಆದರೆ, ಬೇರೆ ಮಾರ್ಗವಿಲ್ಲ' ಎಂದು ಹೇಳಿದರು.

ಇನ್ನೂ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಕೂಡ ಬುಧವಾರದಿಂದ ಮರಳು ಸಾಗಾಣೆ ಲಾರಿಗಳ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದೆ. ಈ ಬಗ್ಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ, `ಸರಕು ಸಾಗಣೆ ಲಾರಿಗಳ ಮಾಲೀಕರು ಮತ್ತು ಚಾಲಕರ ಮೇಲೆ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಅಸಮರ್ಪಕ ರೀತಿಯಲ್ಲಿ ದಂಡ ವಿಧಿಸುತ್ತಿದೆ. ಅಲ್ಲದೇ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸುತ್ತಿದೆ. ಇದು ಕಾರ್ಮಿಕ ವಿರೋಧಿ ಕ್ರಮವಾಗಿದ್ದು, ಸಮಸ್ಯೆಗಳನ್ನು ಈಡೇರಿಸುವವರೆಗೂ ಮುಷ್ಕರವನ್ನು ಹಿಂಪಡೆಯುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.