ADVERTISEMENT

‘ಮುದ್ರಾ’ ಹೆಸರಿನಲ್ಲಿ ಪಂಗನಾಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
‘ಮುದ್ರಾ’ ಹೆಸರಿನಲ್ಲಿ ಪಂಗನಾಮ
‘ಮುದ್ರಾ’ ಹೆಸರಿನಲ್ಲಿ ಪಂಗನಾಮ   

ಬೆಂಗಳೂರು: ಕೇಂದ್ರ ಸರ್ಕಾರದ ‘ಮುದ್ರಾ’ ಯೋಜನೆಯಡಿ ಸಾಲ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪದಡಿ ಪುನೀತ್‌ (34) ಎಂಬಾತನನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮಪುರದ ನಿವಾಸಿಯಾದ ಪುನೀತ್, ಬಿ.ಎ ಪದವೀಧರ. ‘ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ’ ಉದ್ಯೋಗಿಗಳು ತನಗೆ ಪರಿಚಯವಿರುವುದಾಗಿ ಹೇಳಿಕೊಳ್ಳುತ್ತಿದ್ದ ಈತ, ಸುಮಾರು 70 ಮಂದಿಯನ್ನು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಆತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಮಲ್ಲೇಶ್ವರದ ನಿವಾಸಿ ನಂದೀಶ್‌ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಮುದ್ರಾ ಯೋಜನೆಯಡಿ ₹4 ಲಕ್ಷ ಸಾಲ ಕೊಡಿಸುವುದಾಗಿ ಹೇಳಿ ₹70,000 ಪಡೆದಿದ್ದ. ಅವರ ಸ್ನೇಹಿತ ಸಂತೋಷ್‌ ಎಂಬುವರಿಗೆ ₹50 ಲಕ್ಷ ಸಾಲ ಕೊಡಿಸುವುದಾಗಿ ಹೇಳಿ ₹3.80 ಲಕ್ಷ ಪಡೆದುಕೊಂಡಿದ್ದ. ನಂತರ, ಸಾಲ ಕೊಡಿಸದೆ ನಾಪತ್ತೆಯಾಗಿದ್ದ. ಈ ಬಗ್ಗೆ ನಂದೀಶ್‌ ದೂರು ನೀಡಿದ್ದರು’ ಎಂದು ಮಾಹಿತಿ ನೀಡಿದರು.

ADVERTISEMENT

ಕ್ಯಾಬ್‌ ಚಾಲಕನಿಗೆ ವಂಚನೆ: ಇನ್ನೊಂದು ಪ್ರಕರಣದಲ್ಲಿ ಆರೋಪಿ, ಕ್ಯಾಬ್‌ ಚಾಲಕ ಶಿವಪ್ರಸಾದ್‌ ಎಬುವರಿಗೂ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮೊಬೈಲ್‌ ಆ್ಯಪ್‌ ಬಳಸಿ ಜನವರಿಯಲ್ಲಿ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದ ಆರೋಪಿ, ಶಿವಪ್ರಸಾದ್‌ರನ್ನು ಪರಿಚಯ ಮಾಡಿಕೊಂಡಿದ್ದ. ‘ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಎಸ್‌.ಬಿ.ಐನಲ್ಲಿ ₹4 ಲಕ್ಷ ಸಾಲ ನೀಡಲಾಗುತ್ತಿದೆ. ಬ್ಯಾಂಕ್‌ ಉದ್ಯೋಗಿಯೊಬ್ಬರು ನನಗೆ ಪರಿಚಯವಿದ್ದಾರೆ. ಸಾಲ ಮಂಜೂರು ಮಾಡಿಸಿಕೊಳ್ಳಲು ₹64 ಸಾವಿರ ಖರ್ಚಾಗುತ್ತದೆ. ಅದನ್ನು ಕೊಟ್ಟರೆ ತ್ವರಿತವಾಗಿ ಸಾಲ ಕೊಡಿಸುತ್ತೇನೆ’ ಎಂದು ಆರೋಪಿ ಹೇಳಿದ್ದ.

ಹಣಕಾಸು ಸಮಸ್ಯೆಯಲ್ಲಿದ್ದ ಶಿವಪ್ರಸಾದ್, ಆತನ ಮಾತು ನಂಬಿ ಫೆಬ್ರುವರಿಯಲ್ಲಿ ₹64 ಸಾವಿರ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಆರೋಪಿ, ಚಲನ್ ಸಹ ಕೊಟ್ಟಿದ್ದ. ಶೀಘ್ರವೇ ಸಾಲ ಮಂಜೂರಾಗುತ್ತದೆಂದು ಹೇಳಿದ್ದ. ಸಾಲ ಪಡೆಯುತ್ತಿದ್ದ ವಿಷಯವನ್ನು ಶಿವಪ್ರಸಾದ್, ತಮ್ಮ ಪರಿಚಯಸ್ಥರಿಗೂ ತಿಳಿಸಿದ್ದರು. ಅವರೆಲ್ಲರೂ ಆರೋಪಿಯನ್ನು ಸಂಪರ್ಕಿಸಿ ಸಾಲ ಪಡೆದುಕೊಳ್ಳಲು ಹಣ ಕೊಟ್ಟಿದ್ದರು ಎಂದು ಹೇಳಿದರು.

ಎಲ್ಲರಿಂದಲೂ ಹಣ ಪಡೆದುಕೊಂಡ ಆರೋಪಿ ನಾಪತ್ತೆಯಾಗಿದ್ದ. ಆತನ ಮೊಬೈಲ್‌ ಸಹ ಸ್ವಿಚ್ಡ್‌ ಆಫ್‌ ಆಗಿತ್ತು. ವಂಚನೆಗೀಡಾದವರು ಎಸ್‌ಬಿಐ ಮೆಜೆಸ್ಟಿಕ್‌ ಶಾಖೆಗೆ ಹೋಗಿ ವಿಚಾರಿಸಿದ್ದರು. ‘ನಿಮ್ಮ ಹೆಸರಿನಲ್ಲಿ ಯಾವುದೇ ಚಲನ್ ನೀಡಿಲ್ಲ. ಯಾರೋ ನಿಮ್ಮನ್ನು ವಂಚಿಸಿದ್ದಾರೆ’ ಎಂದು ಅಲ್ಲಿಯ ಉದ್ಯೋಗಿಗಳು ಹೇಳಿದ್ದರು. ಅವಾಗಲೇ ಶಿವಪ್ರಸಾದ್‌, ಬಸವೇಶ್ವರ ನಗರ ಠಾಣೆಗೆ ಹೋಗಿ ದೂರು ನೀಡಿದ್ದರು ಎಂದರು.

ಸ್ನೇಹಿತನಿಂದ ಸಿಕ್ಕಿಬಿದ್ದ: ‘ಆರೋಪಿ ವಾಸವಿದ್ದ ಶ್ರೀರಾಮಪುರದ ಮನೆಗೆ ಹೋಗಿ ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಆತ ತನ್ನ ಸ್ನೇಹಿತನೊಬ್ಬನನ್ನು ಭೇಟಿ ಮಾಡಲು ಮಲ್ಲೇಶ್ವರಕ್ಕೆ ಬಂದಿದ್ದ. ಅವಾಗಲೇ ಸ್ನೇಹಿತನ ಸಮೇತ ಪುನೀತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಪ್ರಕರಣದಲ್ಲಿ ಸ್ನೇಹಿತನ ಪಾತ್ರವೇನು ಇಲ್ಲವೆಂಬುದು ತಿಳಿಯುತ್ತಿದ್ದಂತೆ, ಆತನನ್ನು ಬಿಟ್ಟು ಕಳುಹಿಸಿದ್ದೇವೆ. ಪುನೀತ್‌ನನ್ನು ಮಾತ್ರ ಬಂಧಿಸಿದೆವು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದ. ಆತನ ಬಂಧನದ ಸುದ್ದಿ ತಿಳಿದ ಹಲವರು, ಠಾಣೆಗೆ ಬಂದು ವಂಚನೆ ಬಗ್ಗೆ ಮಾಹಿತಿ ನೀಡಿದ್ದರು. ಆರೋಪಿಯ ವಿರುದ್ಧ ಕೆಲವರು ಶ್ರೀರಾಮಪುರ ಹಾಗೂ ಬಸವೇಶ್ವರ ನಗರ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಪುನೀತ್‌ನನ್ನು ಆ ಠಾಣೆಯ ಅಧಿಕಾರಿಗಳು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ’ ಎಂದರು.

ಕ್ರಿಕೆಟ್‌ ಬೆಟ್ಟಿಂಗ್‌ ಕಟ್ಟುತ್ತಿದ್ದ
‘ಬಂಧಿತ ಆರೋಪಿ, ಐಪಿಎಲ್‌ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿದ್ದ ವೇಳೆ ಬೆಟ್ಟಿಂಗ್‌ ಕಟ್ಟುತ್ತಿದ್ದ. ಈ ವಿಷಯವನ್ನು ಆತನೇ ಸ್ನೇಹಿತರ ಬಳಿ ಹೇಳಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ವಂಚನೆಯಿಂದ ಗಳಿಸಿದ ಹಣವನ್ನು ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿರುವ ಅನುಮಾನವಿದೆ. ಆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.