ADVERTISEMENT

ಮೂರನೇ ದೂರಿನ ವಿಚಾರಣೆ; ಬಿಎಸ್‌ವೈ ಗೈರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೂರನೇ ಖಾಸಗಿ ದೂರಿನ ಸಂಬಂಧ ಜಾಮೀನು ಕೋರಿರುವ ಅರ್ಜಿಯ ವಿಚಾರಣೆಗೆ ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ವಕೀಲರೂ ಗೈರು ಹಾಜರಾಗಿದ್ದರು. ಇದರಿಂದಾಗಿ ಇತರೆ ಆರೋಪಿಗಳ ಪರ ವಕೀಲರು ವಾದ ಮಂಡಿಸಿದರು.

ಮೂರು ಡಿನೋಟಿಫಿಕೇಷನ್ ಪ್ರಕರಣಗಳ ಬಗ್ಗೆ ಬಾಷಾ ಸಲ್ಲಿಸಿರುವ ದೂರಿನ ಸಂಬಂಧ ಯಡಿಯೂರಪ್ಪ ಮತ್ತು ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಪ್ರಮುಖ ಆರೋಪಿಗಳಾದ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ರಾಘವೇಂದ್ರ ವಿಚಾರಣೆಗೆ ಹಾಜರಾಗಿರಲಿಲ್ಲ. ಅವರ ವಕೀಲರಾದ ರವಿ ಬಿ.ನಾಯಕ್ ಹಾಗೂ ಸಿ.ವಿ.ನಾಗೇಶ್ ಕೂಡ ಗೈರುಹಾಜರಾಗಿದ್ದರು.

ಯಡಿಯೂರಪ್ಪ ಅವರು ಗೈರು ಹಾಜರಿಗೆ ಕೊಪ್ಪಳ ಚುನಾವಣಾ ಪ್ರಚಾರದ ಕಾರಣ ನೀಡಿದ್ದರು. ರಾಘವೇಂದ್ರ ಶಿವಮೊಗ್ಗದಲ್ಲಿ ಪಕ್ಷದ ಸಭೆಯ ಕಾರಣ ನೀಡಿದ್ದರು. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕಡಾ.ಡಿ.ಹೇಮಚಂದ್ರಸಾಗರ್, ಎಸ್. ಎನ್.ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಇತರೆ ಎಲ್ಲ ಆರೋಪಿಗಳೂ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ವಿಚಾರಣೆ ಆರಂಭಿಸುತ್ತಿದ್ದಂತೆಯೇ ಯಾರು ವಾದ ಮಂಡನೆ ಆರಂಭಿಸಬೇಕೆಂಬ ವಿಷಯದಲ್ಲಿ ಗೊಂದಲ ಉದ್ಭವವಾಯಿತು. ಆರೋಪಿಗಳ ಪರ ವಕೀಲರ ನಡುವೆಯೇ ಈ ವಿಷಯದಲ್ಲಿ ಸಹಮತ ವ್ಯಕ್ತವಾಗಲಿಲ್ಲ. ಆರೋಪಿಗಳ ಪರ ವಕೀಲರು ವಾದ ಮಂಡನೆ ಪೂರ್ಣಗೊಳಿಸಿದ ಬಳಿಕವೇ ತಾವು ವಾದ ಆರಂಭಿಸುವುದಾಗಿ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ತಿಳಿಸಿದರು.

ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಪರ ವಕೀಲ ಟಾಮಿ ಸೆಬಾಸ್ಟಿಯನ್ ಹಾಗೂ ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಸುಗುಣಾ ರೆಡ್ಡಿ ವೀರಣ್ಣ ಮತ್ತು ನಮ್ರತಾ ಶಿಲ್ಪಿ ಪರ ವಕೀಲರು ವಾದ ಮಂಡಿಸಿದರು. ಉಳಿದ ಎಲ್ಲ ಆರೋಪಿಗಳ ವಕೀಲರು ಶುಕ್ರವಾರವೇ ವಾದ ಮಂಡನೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.