ADVERTISEMENT

ಮೂರು ವರ್ಷಗಳಲ್ಲಿ 55 ಗಂಧದ ಮರ ಕಳವು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 20:21 IST
Last Updated 26 ಮಾರ್ಚ್ 2018, 20:21 IST
ಮೂರು ವರ್ಷಗಳಲ್ಲಿ 55 ಗಂಧದ ಮರ ಕಳವು
ಮೂರು ವರ್ಷಗಳಲ್ಲಿ 55 ಗಂಧದ ಮರ ಕಳವು   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಮೂರು ವರ್ಷಗಳಲ್ಲಿ 55 ಗಂಧದ ಮರಗಳು ಕಳವಾಗಿವೆ.

‘2017ರ ಡಿಸೆಂಬರ್‌ ತಿಂಗಳಲ್ಲೇ 26 ಶ್ರೀಗಂಧ ಮರಗಳ ಕಳ್ಳತನವಾಗಿದೆ. ಕಳ್ಳತನವಾಗಿರುವ ಸಾಕಷ್ಟು ಮರಗಳ ಬಗ್ಗೆ ವಿಶ್ವವಿದ್ಯಾಲಯಕ್ಕೆ ಮಾಹಿತಿಯೇ ಇಲ್ಲ. ಕಾಂಡದಲ್ಲಿ ತಿರುಳು ಬೆಳೆಯದ ಮರಗಳನ್ನು ಕಡಿದು ಕಳ್ಳರು ಅಲ್ಲೇ ಬಿಟ್ಟು ಹೋಗುತ್ತಾರೆ. ಈ ಮರಗಳ ಸಂಖ್ಯೆಯೂ ಸಾಕಷ್ಟಿದೆ’ ಎಂದು ಆರ್‌ಟಿಇ ಕಾರ್ಯಕರ್ತ ವೀರಯ್ಯ ಹಿರೇಮಠ ತಿಳಿಸಿದರು.

ನಗರದಲ್ಲೇ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಹೊಂದಿರುವ ತಾಣ ಇದಾಗಿದೆ. ಜ್ಞಾನಭಾರತಿ ಆವರಣದ ವಿಸ್ತೀರ್ಣ 1,100 ಎಕರೆ. ಇಲ್ಲಿನ ಜೈವಿಕ ಉದ್ಯಾನ ಭಾಗ–2ರ 300 ಎಕರೆಯಲ್ಲಿ 340 ಶ್ರೀಗಂಧದ ಮರಗಳಿವೆ. ಭಾಗ–1ರಲ್ಲಿನ ಮರಗಳ ಗಣತಿ ಪ್ರಗತಿಯಲ್ಲಿದೆ ಎಂದು ಜೈವಿಕ ಉದ್ಯಾನದ ಸಮನ್ವಯ ಅಧಿಕಾರಿ ಟಿ.ಜೆ.ರೇಣುಕಾಪ್ರಸಾದ್‌ ತಿಳಿಸಿದರು.

ADVERTISEMENT

‘ಜೈವಿಕ ಉದ್ಯಾನದ ಕಚೇರಿ 2016ರಲ್ಲಿ ಪ್ರಾರಂಭವಾಗಿದೆ. ಹಾಗಾಗಿ 10 ವರ್ಷಗಳ ಮಾಹಿತಿ ಲಭ್ಯವಿಲ್ಲ. 2016–17ನೇ ಸಾಲಿನಲ್ಲಿ ಮರ ಮತ್ತು ರೆಂಬೆಕೊಂಬೆಗಳ ಕಳವಾದ ವಿವರಗಳು ಮಾತ್ರ ನಮ್ಮಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ ನೀಲಗಿರಿ ಮರಗಳ ಗಣತಿ ಮಾಡಲಾಗಿದೆ. ಶ್ರೀಗಂಧ ಮರಗಳ ಗಣತಿಗೆ ಸ್ವಯಂಸೇವಕರ ಹುಡುಕಾಟದಲ್ಲಿದ್ದೇವೆ. ಶೀಘ್ರದಲ್ಲಿ ಅವುಗಳ ದಾಖಲಾತಿಯೂ ಆಗುತ್ತದೆ. ಅರಣ್ಯ ಅಪರಾಧ ವಿಭಾಗದ ಎಡಿಜಿಪಿಗೆ ಪತ್ರ ಬರೆದಿದ್ದು, ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದೇವೆ. ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವೊಂದು ಭೇಟಿ ನೀಡಿ ಸಿಸಿಟಿವಿ ಕ್ಯಾಮೆರಾ ಮಾಹಿತಿಗಳನ್ನು ಸಂಗ್ರಹಿಸಿದೆ’ ಎಂದು ಹೇಳಿದರು.

‘ಬೆಂಗಳೂರು ವಿಶ್ವವಿದ್ಯಾಲಯದ ಕಟ್ಟಡಗಳು ಹಾಗೂ ಮುಖ್ಯ ದ್ವಾರಗಳಿಗೆ ಮಾತ್ರ ಭದ್ರತೆ ಒದಗಿಸಲಾಗಿದೆ. ಜೈವಿಕ ಉದ್ಯಾನದಲ್ಲಿ ಯಾವುದೇ ಭದ್ರತೆಗಳಿಲ್ಲ. ತ್ಯಾಜ್ಯ ಎಸೆಯುವುದನ್ನು ತಡೆಯಲು ಹಗಲಿನ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.