ADVERTISEMENT

ಮೂರು ಸಾವು; 15 ಮಂದಿಗೆ ಗಾಯ

ಮಿನಿ ಲಾರಿ-ಟೆಂಪೊ ಟ್ರಾವೆಲರ್ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 20:05 IST
Last Updated 7 ಸೆಪ್ಟೆಂಬರ್ 2013, 20:05 IST

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಗೇಟ್ ಬಳಿ ಶನಿವಾರ ಸಂಜೆ ಲಾರಿ ಮತ್ತು ಟೆಂಪೊ ಟ್ರಾವೆಲರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಮೂಲದ ಕವಿತಾ (25), ಮುರುಗನ್ (25) ಹಾಗೂ ಮಂಜುನಾಥ್ ಮೃತಪಟ್ಟವರು. ಘಟನೆಯಲ್ಲಿ 15 ಮಂದಿ ಗಾಯ ಗೊಂಡಿದ್ದು, ಅವರನ್ನು ಸ್ಪರ್ಶ ಮತ್ತು ಬ್ಲಾಸಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಹಾಗೂ ಗಾಯಾಳುಗಳು ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡ ತೋಗೂರಿನ `ಅರವಿಂದ್ ಮಿಲ್ಸ್' ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡು ತ್ತಿದ್ದರು. ಶನಿವಾರ ಸಂಜೆ ಕಾರ್ಮಿಕರನ್ನು ಮನೆಗಳಿಗೆ ಬಿಡಲು ಟೆಂಪೊ ಟ್ರಾವೆಲರ್‌ನಲ್ಲಿ (ಟಿ.ಟಿ) ಕರೆದೊಯ್ಯುವಾಗ ಈ ದುರ್ಘಟನೆ ನಡೆದಿದೆ. ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಟಿ.ಟಿ ಚಾಲಕ, ಸಂಜೆ 6.30ರ ಸುಮಾರಿಗೆ ಯಡವನಹಳ್ಳಿ ಗೇಟ್‌ಗೆ ಬಂದಿದ್ದಾನೆ. ಈ ವೇಳೆ ತಿರುವು ಪಡೆಯುವ ಯತ್ನದಲ್ಲಿ ನಿಯಂತ್ರಣ ಕಳೆದು ಕೊಂಡ ಆತ, ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾನೆ.

ಬಳಿಕ ಟ.ಟಿ, ವಿಭಜಕವನ್ನು ದಾಟಿ ಪಕ್ಕದ ರಸ್ತೆಗೆ ಬಂದಿದೆ. ಇದೇ ಸಂದರ್ಭ ದಲ್ಲಿ ಹೊಸೂರಿನಿಂದ-ಬೆಂಗಳೂರಿನ ಕಡೆಗೆ ಬರುತ್ತಿದ್ದ ಜಲ್ಲಿ ತುಂಬಿದ್ದ ಲಾರಿ, ಟಿ.ಟಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಾಹನ ಮೂರು ಸುತ್ತು ಉರುಳಿ ಪಕ್ಕದ ಸರ್ವಿಸ್ ರಸ್ತೆಗೆ ಬಿದ್ದಿದೆ. ಅಪಘಾತದಲ್ಲಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿ, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಹಾಗೂ ಸಂಚಾರ ಪೊಲೀಸರು ಇತರೆ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊ ಯ್ದಿದ್ದಾರೆ.

ನಾಲ್ವರ ಸ್ಥಿತಿ ಗಂಭೀರ: ಘಟನೆಯಲ್ಲಿ ಕಲೈವಾಣಿ, ವೈಜಯಂತಿ, ಯಲ್ಲಮ್ಮ ಹಾಗೂ ಗಿರಿಜಾ ಎಂಬುವರು ಗಂಭೀರ ಗಾಯಗೊಂಡಿದ್ದು, ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿ ದಂತೆ ಒಂದೂವರೆ ವರ್ಷದ ಮೇಘನಾ, ಮಲ್ಲೇಶಿಯಂ (30), ಅನಿತಾ (42), ಪ್ರಕಾಶ್ (21), ರೇಷ್ಮಾ (23), ಪದ್ಮಾ (26), ಸುಗಮಾ ಎಂಬುವರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ.

ಸಂಚಾರ ದಟ್ಟಣೆ: ರಸ್ತೆ ಅಪಘಾತ ದಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತ್ದ್ದಿದ ಕಾರಣ ಮುಖ್ಯರಸ್ತೆಯಲ್ಲಿ ಗಂಟೆಗಟ್ಟಲೆ ವಾಹನ ದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.