ADVERTISEMENT

ಮೆಟ್ರೊ: ತಿರುವುಗಳಲ್ಲಿ 45ಕಿ.ಮೀ ವೇಗ ಮಿತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:50 IST
Last Updated 23 ಸೆಪ್ಟೆಂಬರ್ 2011, 19:50 IST

ಬೆಂಗಳೂರು: `ನಮ್ಮ ಮೆಟ್ರೊ~ದ ತಿರುವಿನ ಹಳಿ ಮಾರ್ಗ ಮೊನಚಾಗಿರುವುದರಿಂದ ರೈಲಿನ ಗರಿಷ್ಠ ವೇಗ ಮಿತಿಯನ್ನು ಶೇ 10ರಷ್ಟು ನಿಯಂತ್ರಿಸುವಂತೆ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತ ಡಿ.ಕೆ. ಸಿಂಗ್ ಸಲಹೆ ಮಾಡಿದ್ದಾರೆ.

ತಿರುವುಗಳಲ್ಲಿ ಹೇಗೆ ರೈಲುಗಳನ್ನು ನಿಯಂತ್ರಿಸಲಾಗುತ್ತದೆ ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಬಳಿ ಮಾಹಿತಿಯೇ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನೇರವಾದ ಮಾರ್ಗಗಳಲ್ಲಿ ಮೆಟ್ರೊ ರೈಲು ಗಂಟೆಗೆ ಗರಿಷ್ಠ 65.7 ಕಿ.ಮೀ ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಈ ಮುನ್ನ ಲಖನೌನ ಸಂಶೋಧನಾ ವಿನ್ಯಾಸ ಹಾಗೂ ಗುಣಮಟ್ಟ ಸಂಸ್ಥೆಯು ನೇರ ಮಾರ್ಗಗಳಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ. ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.

ಆದರೆ, ಈ ವೇಗ ಮಿತಿ ನಿಯಂತ್ರಣ ಆರು ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿದೆ. ಆನಂತರ ಪುನರ್ ಪರಿಶೀಲನೆ ನಡೆಸಿ ವೇಗ ಮಿತಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.