ADVERTISEMENT

ಮೇಯೊ ಹಾಲ್ ಬಳಿ ಪಾರ್ಕಿಂಗ್ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಂಗಳೂರು: ಮೇಯೊಹಾಲ್‌ನಲ್ಲಿ ಸಾವಿರಾರು ಮಂದಿ ವಕೀಲರು ಮತ್ತು ಕಕ್ಷಿದಾರರಿಗೆ ಅಗತ್ಯವಾಗಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೆನ್ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ವೆುೀಯೊ ಹಾಲ್ ಪಕ್ಕದಲ್ಲಿರುವ ಯುಟಿಲಿಟಿ ಕಟ್ಟಡದ ಹಿಂಭಾಗದ ನವೀಕೃತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೇಯೊಹಾಲ್ ಪರಂಪರೆ ಕಟ್ಟಡ ಎಂದು ಗುರುತಿಸಲಾಗಿದ್ದು, ಅದರಲ್ಲಿಯೇ ಇಲ್ಲಿಯವರೆಗೆ 12 ವಿವಿಧ ಕೋರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

120 ಕೋರ್ಟ್ ಸಿಬ್ಬಂದಿ ಸೇರಿದಂತೆ 1200 ವಕೀಲರು ಹಾಗೂ ಹಲವಾರು ಕಕ್ಷಿದಾರರು ಭೇಟಿ ನೀಡುವುದರಿಂದ ಅವರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಆಗಬೇಕಿದೆ. ಈಗಾಗಲೇ ಸರ್ಕಾರ ಮೇಯೊಹಾಲ್‌ನ ಉತ್ತರ ಭಾಗದಲ್ಲಿ ಮತ್ತು ನೆಲದಡಿ ಪಾರ್ಕಿಂಗ್ ಸೌಕರ್ಯವನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದು, ಆದಷ್ಟು ಶೀಘ್ರವೇ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ ರಾಷ್ಟ್ರದ ಎಲ್ಲೆಡೆ ಇರುವ ಕೋರ್ಟ್‌ಗಳಿಗೆ ಕಟ್ಟಡ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿರ್ದೇಶನವನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಮಾತನಾಡಿ, ನವೀಕೃತ ಕಟ್ಟಡದಲ್ಲಿ ಇನ್ನು ಮುಂದೆ ವಿವಿಧ ಕೋರ್ಟ್ ಕಲಾಪಗಳು ಆರಂಭಗೊಳ್ಳಲಿದ್ದು, ಯುಟಿಲಿಟಿ ಬಿಲ್ಡಿಂಗ್‌ನಲ್ಲಿ ಕೆಲ ಕಟ್ಟಡಗಳನ್ನು ಪಡೆದು ಅವುಗಳಲ್ಲಿ ಕೋರ್ಟ್‌ನ ದಾಖಲೆಗಳನ್ನು ಸಂಗ್ರಹಿಸಿಡುವ ಚಿಂತನೆಯೂ ನಡೆದಿದೆ ಎಂದು ಅವರು ಹೇಳಿದರು.

ಲೋಕೋಪಯೋಗಿ ಇಲಾಖೆಯು ಕಳೆದ ಫೆಬ್ರುವರಿಯಲ್ಲಿ ಈ ನವೀಕರಣ ಕಾರ್ಯವನ್ನು 1.22 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿತ್ತು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ಎ.ಎನ್.ವೇಣುಗೋಪಾಲಗೌಡ, ಎಲ್.ನಾರಾಯಣಸ್ವಾಮಿ, ಲಘು ವ್ಯಾಜ್ಯಗಳ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಪಿ.ಡಿ.ವೈಂಗಣಕರ್, ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಬಿ.ಬೂದಿಹಾಳ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸಿ.ಕುಂತಿಯಾ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.