ಹೊಸಕೋಟೆ: ಪಟ್ಟಣದ ಮಧ್ಯೆ ಹಾದು ಹೋಗಿರುವ ಹೆದ್ದಾರಿಯ ಮೇಲ್ಸೇತುವೆ ಕೆಳಗಿನ ಬಹುತೇಕ ಜಾಗ ಕಸದ ತೊಟ್ಟಿಯಾಗಿದ್ದು ಸಾರ್ವಜನಿಕರು ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಹೆದ್ದಾರಿ ಬದಿಯಲ್ಲಿನ ಅಂಗಡಿಗಳ ಮಾಲೀಕರು ಇಲ್ಲಿಯೆ ಕಸ ಹಾಕುತ್ತಿದ್ದು ಎಲ್ಲಿ ನೋಡಿದರೂ ಕಸದ ರಾಶಿ ಕಣ್ಣಿಗೆ ರಾರಾಜಿಸುತ್ತಿದೆ. ಮೇಲ್ಸೇತುವೆಯ ಕೆಳಗೆ ಎರಡೂ ಬದಿ ಪರ್ಯಾಯ ರಸ್ತೆಯಿದ್ದು ಒಂದು ಬದಿ ಬೆಂಗಳೂರು, ಸರ್ಜಾಪುರ ಕಡೆ ಹೋಗಲು ಮತ್ತೊಂದು ಬದಿ ಕೋಲಾರದ ಕಡೆ ಹೋಗಲು ಬಸ್ ಗಳು ನಿಲ್ಲುತ್ತವೆ. ಹೀಗಾಗಿ ಇಲ್ಲಿ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಬಸ್ ಗೆ ಕಾಯುತ್ತಾ ನಿಂತಿರುತ್ತಾರೆ. ಆದರೆ, ಪ್ರಯಾಣಿಕರಿಗೆ ಇಲ್ಲಿ ಶೌಚಾಲಯದ ಸೌಲಭ್ಯ ಇಲ್ಲದ ಕಾರಣ ಮೇಲ್ಸೇತುವೆ ಕೆಳಗಿನ ಕಂಬಗಳೇ ಮೂತ್ರಾಲಯದ ಜಾಗವಾಗಿದೆ.
ಈ ಜಾಗ ಹೆದ್ದಾರಿಗೆ ಸೇರಿದ್ದರಿಂದ ಪುರಸಭೆಯವರು ಇತ್ತ ಗಮನ ನೀಡುತ್ತಿಲ್ಲ. ಹೆದ್ದಾರಿಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಖಾಸಗಿ ಸಂಸ್ಥೆಯವರು ಸ್ವಚ್ಛತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.