ADVERTISEMENT

ಮೇಸ್ತ್ರಿಪಾಳ್ಯ ಕೆರೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:36 IST
Last Updated 13 ಜುಲೈ 2013, 19:36 IST

ಬೆಂಗಳೂರು: ಕೋರಮಂಗಲದ ಮೇಸ್ತ್ರಿಪಾಳ್ಯ ಕೆರೆಯ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶುಕ್ರವಾರ ಚಾಲನೆ ನೀಡಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪಾಲಿಕೆ ಸದಸ್ಯೆ ಕೋಕಿಲ ರಾಧಾಕೃಷ್ಣ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

`ಮೇಸ್ತ್ರಿಪಾಳ್ಯ ಕೆರೆಯ ಅಭಿವೃದ್ಧಿ ಯೋಜನೆಗೆ ಒಟ್ಟು ರೂ 175 ಲಕ್ಷ ಅಂದಾಜು ಮಾಡಲಾಗಿದ್ದು, ಇನ್ನು ಒಂಬತ್ತು ತಿಂಗಳಿನಲ್ಲಿ ಕೆರೆ ಅಭಿವೃದ್ಧಿ ಯೋಜನೆಯನ್ನು ಮುಗಿಸಲಾಗುವುದು' ಎಂದು ಬಿಡಿಎ ಎಂಜಿನಿಯರ್ ಪಿ.ಎನ್.ನಾಯಕ್ ತಿಳಿಸಿದರು.

`ಕೆರೆಯಲ್ಲಿನ ಕಟ್ಟಡದ ತ್ಯಾಜ್ಯವನ್ನು ತೆಗೆದು ಹಾಕುವುದು, ಕೊಳಚೆ ನೀರು ಶುದ್ಧೀಕರಣ ಘಟಕದ ಸ್ಥಾಪನೆ, ಸುತ್ತಲೂ ಸಸಿಗಳನ್ನು ನೆಡುವುದು  ಮತ್ತಿತರ ಕಾರ್ಯಗಳು ಯೋಜನೆಯಲ್ಲಿದೆ' ಎಂದರು.

`ಮೇಸ್ತ್ರಿಪಾಳ್ಯ ಕೆರೆಯ ಮಾಲೀಕತ್ವದ ಕುರಿತು 2009 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾನೂನು ಸಮರದಲ್ಲಿ ಕೆರೆಯ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. 2010 ರಲ್ಲಿ ಸುಪ್ರೀಂ ಕೋರ್ಟ್ ಬಿಡಿಎ ಪರ ತೀರ್ಪು ನೀಡಿ ಕೆರೆ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ನಮ್ಮ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ' ಎಂದು ಕೋರಮಂಗಲ 3 ನೇ ಬ್ಲಾಕ್‌ನ ನಿವಾಸಿಗಳ ಕಲ್ಯಾಣ ಸಂಘದ ನಿತಿನ್ ಶೇಷಾದ್ರಿ ಹೇಳಿದರು.

`ಬಿಡಿಎ ವಿವರವಾದ ಯೋಜನಾ ವರದಿಯನ್ನು 2011 ರಲ್ಲಿಯೇ ಸಿದ್ಧಪಡಿಸಿತ್ತು. ಟೆಂಡರ್ ಕರೆದರೂ ಯಾರು ಬರಲಿಲ್ಲ. ಇದರಿಂದ, ಅಭಿವೃದ್ಧಿ ಯೋಜನೆಯಲ್ಲಿ ವಿಳಂಬವಾಗಿದೆ' ಎಂದು ಕೋರಮಂಗಲ  ನಿವಾಸಿಗಳ ಕಲ್ಯಾಣ ಸಂಘದ ಸದಸ್ಯ ರಾಧಾಕೃಷ್ಣನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.