ADVERTISEMENT

ಮೈಕಟ್ಟು ಬಣ್ಣಿಸಿದ ಸಾಂಗ್ಲಿಯಾನ !

ಜನರ ಮನಸ್ಥಿತಿ ಬದಲಾಗಿಲ್ಲ: ನಿರ್ಭಯಾ ತಾಯಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಸಾಂಗ್ಲಿಯಾನ
ಸಾಂಗ್ಲಿಯಾನ   

ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿ ಎಚ್‌.ಟಿ.ಸಾಂಗ್ಲಿಯಾನ ಅವರು ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹಾಗೂ ಆಕೆಯ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಮಹಿಳಾ ದಿನಾಚರಣೆ ದಿನ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಅವರು ಮುಖ್ಯ ಅತಿಥಿಯಾಗಿ ಹೋಗಿದ್ದರು. ನಿರ್ಭಯಾ ತಾಯಿ ಕೂಡ ಪಾಲ್ಗೊಂಡಿದ್ದರು.

ಈ ವೇಳೆ ಭಾಷಣ ಪ್ರಾರಂಭಿಸಿದ್ದ ಸಾಂಗ್ಲಿಯಾನ, ‘ನಿರ್ಭಯಾ ತಾಯಿ ಇಲ್ಲಿಗೆ ಬಂದಿದ್ದು, ನಮ್ಮ ಜತೆ ಮಾತನಾಡಿದ್ದು ತುಂಬಾ ಸಂತಸ ತಂದಿದೆ. ಅವರು ಉತ್ತಮ ಮೈಕಟ್ಟು ಹೊಂದಿದ್ದಾರೆ. ತಾಯಿಯೇ ಅಷ್ಟು ಸುಂದರವಾಗಿರುವಾಗ, ಮಗಳು ಇನ್ನೆಷ್ಟು ಚೆನ್ನಾಗಿದ್ದಳು ಎಂಬುದನ್ನು ನಾನು ಊಹಿಸಬಲ್ಲೆ’ ಎಂದು ಹೇಳಿದ್ದರು.

ADVERTISEMENT

‘ಒಂದು ವೇಳೆ ಮಹಿಳೆಯರ ಮೇಲೆ ಯಾರಾದರೂ ದೌರ್ಜನ್ಯ ಮಾಡಲು ಬಂದರೆ, ಸುಮ್ಮನೆ ಶರಣಾಗಿಬಿಡಬೇಕು. ಅವರು ಹೇಳಿದಂತೆ ಕೇಳಿದರೆ, ಕೊಲೆಯಾಗುವುದನ್ನು ತಪ್ಪಿಸಿಕೊಳ್ಳಬಹುದು’ ಎಂದೂ ಹೇಳಿದ್ದರು. ಈ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಹೇಳಿಕೆಗೆ ಕಾರ್ಯಕ್ರಮದಲ್ಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ.

ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಸಾಂಗ್ಲಿಯಾನ, ‘ಯಾವುದೇ ಕೆಟ್ಟ ಉದ್ದೇಶದಿಂದ ಆ ರೀತಿ ಹೇಳಲಿಲ್ಲ. ಯಾರಾದರೂ ನನ್ನ ಹತ್ತಿರ ಬಂದು, ‘ನೀವು ಎಷ್ಟು ಚೆನ್ನಾಗಿದ್ದೀರಾ. ಇನ್ನು 40 ವರ್ಷದ ವ್ಯಕ್ತಿಯಂತೆ ಕಾಣಿಸುತ್ತೀರಾ’ ಎಂದು ಹೇಳಿದರೆ ನನಗೆ ಸಂತೋಷವಾಗುತ್ತದೆ. ಅದೇ ಅರ್ಥದಲ್ಲಿ ನಾನು ಅವರಿಗೂ ಹೇಳಿದ್ದು. ಒಬ್ಬ ವ್ಯಕ್ತಿಯ ಮೆಚ್ಚುಗೆ ವ್ಯಕ್ತಪಡಿಸುವದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದ್ದಾರೆ.
***
ನವದೆಹಲಿ: ‘ಜನರ ಮನಸ್ಥಿತಿ ಬದಲಾಗಿಲ್ಲ’ ಎಂದು ನಿರ್ಭಯಾ ಅವರ ತಾಯಿ ಆಶಾದೇವಿ ಅವರು ಸಾಂಗ್ಲಿಯಾನ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ‘ವೈಯಕ್ತಿಕ ಬಣ್ಣನೆಗೆ ಬದಲಾಗಿ ನಮ್ಮ ಹೋರಾಟದ ಕುರಿತು ಸಾಂಗ್ಲಿಯಾನ ಮಾತನಾಡಿದ್ದರೆ ಸೂಕ್ತವಾಗಿರುತ್ತಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.