ADVERTISEMENT

ಮೈಸೂರು ರಸ್ತೆ ಮೇಲ್ಸೇತುವೆ ದುರಸ್ತಿ ಆರಂಭ

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ನಗರದ ಮೈಸೂರು ರಸ್ತೆ ಮೇಲ್ಸೇತುವೆಯ ಜಾಯಿಂಟ್‌ಗಳಿಗೆ ಕಬ್ಬಿಣದ ಪ್ಲೇಟ್ ಅಳವಡಿಕೆ ಕಾರ್ಯ ಆರಂಭವಾಗಿರುವುದರಿಂದ ರಾಯನ್ ವೃತ್ತದವರೆಗಿನ ಮೇಲ್ಸೇತುವೆಯು ಸಂಚಾರಕ್ಕೆ ಮುಕ್ತವಾಗಿದ್ದು, ಮುಂದಿನ ಭಾಗವನ್ನು ಮಂಗಳವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ	-ಪ್ರಜಾವಾಣಿ ಚಿತ್ರ
ನಗರದ ಮೈಸೂರು ರಸ್ತೆ ಮೇಲ್ಸೇತುವೆಯ ಜಾಯಿಂಟ್‌ಗಳಿಗೆ ಕಬ್ಬಿಣದ ಪ್ಲೇಟ್ ಅಳವಡಿಕೆ ಕಾರ್ಯ ಆರಂಭವಾಗಿರುವುದರಿಂದ ರಾಯನ್ ವೃತ್ತದವರೆಗಿನ ಮೇಲ್ಸೇತುವೆಯು ಸಂಚಾರಕ್ಕೆ ಮುಕ್ತವಾಗಿದ್ದು, ಮುಂದಿನ ಭಾಗವನ್ನು ಮಂಗಳವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಮೈಸೂರು ರಸ್ತೆ ಮೇಲ್ಸೇತುವೆಯ 14 ಟ್ರಾನ್ಸ್‌ಫ್ಲೆಕ್ಸ್ ಎಕ್ಸ್‌ಪ್ಯಾನ್‌ಷನ್ ಜಾಯಿಂಟ್‌ಗಳ (ಮೇಲ್ಸೇತುವೆ ಪಿಲ್ಲರ್‌ಗಳ ಮೇಲೆ ಎರಡೂ ಕಡೆಯ ಸಿಮೆಂಟ್ ಬ್ಲಾಕ್‌ಗಳನ್ನು ಸಂಪರ್ಕಿಸುವಂತೆ ಕಬ್ಬಿಣದ ಪ್ಲೇಟ್‌ಗಳ ಅಳವಡಿಕೆ) ಮರುಜೋಡಣೆ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಂಗಳವಾರದಿಂದ ಚಾಲನೆ ನೀಡಿದೆ.

ಕಬ್ಬಿಣದ ಪ್ಲೇಟ್‌ಗಳ ಅಳವಡಿಕೆಗಾಗಿ ಸ್ಯಾನ್‌ಫೀಲ್ಡ್ ಇಂಡಿಯಾ ಸಂಸ್ಥೆಗೆ ್ಙ 2.65 ಕೋಟಿ ಅಂದಾಜು ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. ಈ ಕಾರ್ಯಕ್ಕೆ ಸ್ಟುಪ್ ಕಂಪೆನಿಯನ್ನು ಯೋಜನಾ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಕೆ.ಆರ್.ಮಾರುಕಟ್ಟೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ನಳಂದ ಚಿತ್ರಮಂದಿರ ಸಮೀಪದ ಮೇಲ್ಸೇತುವೆ ಭಾಗದಲ್ಲಿ ಕಬ್ಬಿಣದ ಪ್ಲೇಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

`ಸುಮಾರು ಎರಡೂವರೆ ಕಿ.ಮೀ ಉದ್ದದ ಮೇಲ್ಸೇತುವೆಯು 15 ಮೀಟರ್ ಅಗಲವಿದೆ. ಸದ್ಯ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಒಂದು ಭಾಗದ ಮಾರ್ಗದಲ್ಲಿ ಮಾತ್ರ ಕಬ್ಬಿಣದ ಪ್ಲೇಟ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಂದು ಜಾಯಿಂಟ್‌ನಲ್ಲಿ ಕಬ್ಬಿಣದ ಪ್ಲೇಟ್ ಅಳವಡಿಸಲು ಕನಿಷ್ಠ ಐದು ದಿನಗಳು ಬೇಕಾಗುತ್ತದೆ. ಮೇಲ್ಸೇತುವೆಯಲ್ಲಿ ಒಟ್ಟು 15 ಜಾಯಿಂಟ್‌ಗಳಿದ್ದು, ಸಿರ್ಸಿ ವೃತ್ತ ಬಳಿಯ ಒಂದು ಜಾಯಿಂಟ್‌ಗೆ ಸುಮಾರು ಒಂದೂವರೆ ತಿಂಗಳ ಹಿಂದೆ ಪ್ರಯೋಗಾರ್ಥವಾಗಿ ಕಬ್ಬಿಣದ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ' ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಟಿ.ರಮೇಶ್ ಹೇಳಿದರು.

`ಕಬ್ಬಿಣದ ಪ್ಲೇಟ್ ಅಳವಡಿಕೆಗಾಗಿ ನಗರ ಸಂಚಾರ ಪೊಲೀಸರು ಭಾನುವಾರದವರೆಗೆ (ಜ.13) ಕಾಲಾವಕಾಶ ನೀಡಿದ್ದಾರೆ. ಸಂಚಾರ ಪೊಲೀಸರು ಕಾಲಾವಕಾಶ ನೀಡಿದಂತೆ ಹಂತ ಹಂತವಾಗಿ ಕಬ್ಬಿಣದ ಪ್ಲೇಟ್‌ಗಳನ್ನು ಅಳವಡಿಸಲಾಗುವುದು. ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕಬ್ಬಿಣದ ಪ್ಲೇಟ್‌ಗಳ ಅಳವಡಿಕೆ ಕಾರ್ಯ ನಡೆಯಲಿದೆ' ಎಂದು ಅವರು ತಿಳಿಸಿದರು.

`1999ರಲ್ಲಿ ರೂ.90 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಎಲ್ ಅಂಡ್ ಟಿ ಕಂಪೆನಿಯು ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಸಿತ್ತು. ನಿರ್ಮಾಣದ ಸಮಯದಲ್ಲಿ ಜಾಯಿಂಟ್‌ಗಳಿಗೆ ರಬ್ಬರ್‌ನ ಬುಷ್‌ಗಳನ್ನು ಅಳವಡಿಸಲಾಗಿತ್ತು. ರಬ್ಬರ್ ಬುಷ್‌ಗಳಿಗೆ ಹತ್ತು ವರ್ಷಗಳ ವಾಯಿದೆ ನೀಡಲಾಗಿತ್ತು. ಆ ಪ್ರಕಾರ 2009ಕ್ಕೆ ವಾಯಿದೆ ಮುಗಿದರೂ ತಾಂತ್ರಿಕ ಕಾರಣಗಳಿಂದ ರಬ್ಬರ್ ಬುಷ್‌ಗಳನ್ನು ತೆಗೆಸಲು ಸಾಧ್ಯವಾಗಿರಲಿಲ್ಲ' ಎಂದು ಹೇಳಿದರು.

`ಮೇಲ್ಸೇತುವೆಯ ಜಾಯಿಂಟ್‌ಗಳಲ್ಲಿ ಕೆಳಗೆ ಅರ್ಧ ಅಡಿ ಮತ್ತು ಮೇಲ್ಭಾಗದಲ್ಲಿ ಒಂದು ಅಡಿಯಷ್ಟು ತೆರೆದ ಜಾಗವಿರುತ್ತದೆ. ಇದನ್ನು ಕಾಂಕ್ರೀಟ್‌ನಿಂದ ಮುಚ್ಚಿ, ನಂತರ ಎರಡೂ ಬದಿಯ ಸಿಮೆಂಟ್ ಬ್ಲಾಕ್‌ಗಳನ್ನು ಕೊರೆದು ಬೋಲ್ಟ್ ಅಳವಡಿಸಿ ಅದರ ಮೇಲೆ 52 ಮಿ.ಮೀ ದಪ್ಪ ಹಾಗೂ ಒಂದು ಮೀಟರ್ ಅಗಲದ ಕಬ್ಬಿಣದ ಪ್ಲೇಟ್‌ಗಳನ್ನು ಅಳವಡಿಸಲಾಗುವುದು. ಈ ಕಬ್ಬಿಣದ ಪ್ಲೇಟ್‌ಗಳನ್ನು ರಸ್ತೆಯ ಮಟ್ಟಕ್ಕೆ ಸರಿಯಾಗಿ ಹೊಂದುವಂತೆ ಅಳವಡಿಸಲಾಗುವುದು. ಇದರಿಂದ ಹಿಂದಿನಂತೆ ಜಾಯಿಂಟ್‌ಗಳ ಜಾಗದಲ್ಲಿ ಡಾಂಬರ್ ಹಾಕುವ ಅಗತ್ಯವಿಲ್ಲ. ಈ ಕಬ್ಬಿಣದ ಪ್ಲೇಟ್‌ಗಳಿಗೆ ಹತ್ತು ವರ್ಷ ವಾಯಿದೆ ನೀಡಲಾಗಿದೆ' ಎಂದು ತಿಳಿಸಿದರು.

ಬದಲಿ ಮಾರ್ಗ
ಕಬ್ಬಿಣದ ಪ್ಲೇಟ್ ಅಳವಡಿಕೆ ಕಾರಣದಿಂದ ಸದ್ಯ ಪುರಭವನದಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ ರಾಯನ್ ವೃತ್ತದವರೆಗೆ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದ್ದು, ಅಲ್ಲಿಂದ ಮುಂದೆ ಮೇಲ್ಸೇತುವೆಯನ್ನು ಮುಚ್ಚಲಾಗಿದೆ. ವಾಹನ ಸವಾರರು ಅಲ್ಲಿಂದ ಮುಂದೆ ಎಡಕ್ಕೆ ತಿರುಗಿ ರಾಯನ್ ವೃತ್ತ ತಲುಪಿ, ಅಲ್ಲಿಂದ ಬೆಂಗಳೂರು ಬಾಡಿ ಬಿಲ್ಡರ್ ಜಂಕ್ಷನ್ ಮೂಲಕ ಮುಂದೆ ಸಾಗಿ ಮೈಸೂರು ರಸ್ತೆ ತಲುಪಬಹುದು.

ಹಂತ ಹಂತವಾಗಿ ಅನುಮತಿ
`ಕಬ್ಬಿಣದ ಪ್ಲೇಟ್ ಅಳವಡಿಕೆಗೆ ಹಂತ ಹಂತವಾಗಿ ಅನುಮತಿ ನೀಡಲಾಗುವುದು. ಸದ್ಯ ಐದು ದಿನಗಳ ಅನುಮತಿ ನೀಡಲಾಗಿದೆ. ಕಾಮಗಾರಿ ಮುಗಿದ ನಂತರ ಮೇಲ್ಸೇತುವೆಯಲ್ಲಿ ಮತ್ತೆ ವಾಹನ ಸಂಚಾರ ಆರಂಭವಾಗಲಿದೆ. ಪುನಃ ಒಂದಷ್ಟು ದಿನಗಳ ನಂತರ ಬದಲಿ ಮಾರ್ಗ ಸೂಚಿಸಿ ಕಾಮಗಾರಿಗೆ ಅನುಮತಿ ನೀಡಲಾಗುವುದು. ಒಂದೇ ಬಾರಿಗೆ ಮೇಲ್ಸೇತುವೆ ಮುಚ್ಚಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಮಾರ್ಗ ಬದಲಾವಣೆ ಮಾಡಿ ಕಾಮಗಾರಿಗೆ ಅನುಮತಿ ನೀಡಲಾಗುವುದು'
-ಡಾ.ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಕಮಿಷನರ್, ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT