ADVERTISEMENT

ಮೈಸೂರು ವಿ.ವಿ ಕುಲಪತಿ ವಿರುದ್ಧ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:01 IST
Last Updated 24 ಸೆಪ್ಟೆಂಬರ್ 2013, 20:01 IST

ಬೆಂಗಳೂರು: ‘ಮೈಸೂರು ವಿಶ್ವ ವಿದ್ಯಾ ಲಯದ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರು ನಡೆಸಿರುವ ಅವ್ಯವಹಾರಗಳ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಬೇಕು’ ಎಂದು ವಿಶ್ವವಿದ್ಯಾನಿಲಯಗಳ ಉಳಿಸಿ ಹೋರಾಟ ವೇದಿಕೆ ಆಗ್ರಹಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಕೆ.ಎಸ್‌.ಶಿವರಾಮ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ 2009 ರಿಂದ 2012ರ ವರೆಗೆ ರಂಗಪ್ಪ ಅವರು ಕುಲಪತಿಯಾಗಿದ್ದ ಸಮಯದಲ್ಲಿ ನೇಮಕಾತಿ, ಬಡ್ತಿ, ದಿನಗೂಲಿ ನೌಕರರ ಕಾಯಂಗೊಳಿಸುವ ಹಾಗೂ ಮಾನ್ಯತೆ ಇಲ್ಲದ ಶಿಕ್ಷಣ ಸಂಸ್ಥೆಗಳಿಗೆ ಪರೀಕ್ಷೆ ನಡೆಸಲು ಅನುಮತಿ ನೀಡಿರುವ ವಿಷಯ ಗಳಿಗೆ ಸಬಂಧಿಸಿದಂತೆ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದರು.

ಇದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಕಾರಣ ಕೇಳಿ ನೋಟಿಸ್‌ ನೀಡಿ, ವಿವರಣೆ ಕೇಳಿದ್ದಾರೆ ಎಂದರು.

ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ 300ಕ್ಕೂ ಹೆಚ್ಚು ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಿರುವ ಆರೋಪವನ್ನು ಎದುರಿಸುತ್ತಿರುವ ಎಚ್‌.ಎಲ್‌. ವಿಶ್ವನಾಥ್‌ ಅವರಿಗೆ ಉಪ ಕುಲಸಚಿವ (ಆಡಳಿತ) ಹುದ್ದೆಗೆ ಬಡ್ತಿ ನೀಡಿದ್ದಾರೆ. ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು, ಯು.ಜಿ.ಸಿ ನಿಯಮಗಳು ಮತ್ತು ಮೀಸಲಾತಿ ಆದೇಶಗಳ ಉಲ್ಲಂಘನೆ ಮಾಡಿ 28 ಹಂಗಾಮಿ ಸಹಾಯಕ ಪ್ರಾಧ್ಯಾಪಕರನ್ನು ಕಾಯಂ ಮಾಡಿದ್ದಾರೆ ಎಂದು ದೂರುದರು. 

21 ಹಂಗಾಮಿ ಪ್ರಾದೇಶಿಕ ನಿರ್ದೇಶಕ ರನ್ನು ನಿಯಮ ಬಾಹಿರವಾಗಿ ನೇಮಕ ಮಾಡಿರುವುದರಿಂದ ವಿಶ್ವ ವಿದ್ಯಾಲಯಕ್ಕೆ ವರ್ಷಕ್ಕೆ 2 ಕೋಟಿ ನಷ್ಟವಾಗುತ್ತಿದೆ. ಹುದ್ದೆಗೆ ತಕ್ಕ ವಿದ್ಯಾರ್ಹತೆ ಇಲ್ಲದವರಿಗೆ ಬಡ್ತಿ ನೀಡುವ ಮೂಲಕ ವ್ಯಾಪಕವಾಗಿ ಅವ್ಯವಹಾರ ನಡೆಸಿದ್ದಾರೆ. ಈ ಸಂಬಂಧ ನ್ಯಾಯಸಮ್ಮತವಾಗಿ ತನಿಖೆ ನಡೆಯ ಬೇಕು ಎಂದು ಒತ್ತಾಯಿಸಿದರು.  

ಮೈಸೂರು ವಿ.ವಿಯ ಕುಲಪತಿಯಾಗಿ ನೇಮಕಗೊಂಡ ಬಳಿಕ ರಂಗಪ್ಪ ಅವರು ಅಗತ್ಯವಿಲ್ಲದ್ದಿದ್ದರೂ ಸರ್ಕಾರಿ ಆದೇಶ ಉಲ್ಲಂಘಿಸಿ ೪೦ ಲಕ್ಷ  ಮೌಲ್ಯದ ಮೂರು ಐಶಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಇದರಿಂದಾಗಿ ವಿಶ್ವ ವಿದ್ಯಾಲಯಕ್ಕೆ ನಷ್ಟವಾಗಿದೆ ಎಂದು ದೂರಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಂಶೋಧನೆ, ಚಿಂತನೆ ಸೇರಿದಂತೆ ಉತ್ತಮ ಕಾರ್ಯಗಳಿಗೆ ಹೆಸರಾಗಿದ್ದ ವಿಶ್ವ ವಿದ್ಯಾಲಯಗಳಲ್ಲಿ ಈಗ ಅವ್ಯವ ಹಾರ ಹಾಗೂ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ವೇದಿಕೆಯ ಸಂಘಟನಾ ಸಂಚಾಲಕ ಸಿ.ಟಿ.ಆಚಾರ್ಯ, ಶೇಖರಯ್ಯ ಎಸ್.ಅಯ್ಯರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.