ADVERTISEMENT

ಮೊದಲಿಟ್ಟ ಮೆಟ್ರೊ ಪಯಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಬೆಂಗಳೂರು: ಕಡೆಗೂ ಬಹುದಿನಗಳ ಕನಸೊಂದು ಗುರುವಾರ ನನಸಾಯಿತು. ನಗರದ ಜನತೆ ಎದುರು ನೋಡುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿತು. ಪೋಂ ಪೋಂ ಸದ್ದು ಮಾಡುತ್ತ ವಿದ್ಯುತ್ ಹಳಿಗಳ ಮೇಲೆ `ನಮ್ಮ ಮೆಟ್ರೊ~ ಮೊದಲ ಸಂಚಾರ ಆರಂಭಿಸಿತು. ಆ ಮೂಲಕ ಮಹಾನಗರಿಯ ಇತಿಹಾಸದ ಪುಟಕ್ಕೆ ಹೊಸ ಅಧ್ಯಾಯವೊಂದು ಸೇರ್ಪಡೆಯಾಯಿತು. ದಕ್ಷಿಣ ಭಾರತದಲ್ಲಿ ಮೊದಲ ಮೆಟ್ರೊ ರೈಲು ಸಂಚಾರ ಆರಂಭಿಸಿದ ಕೀರ್ತಿಗೆ ಉದ್ಯಾನನಗರಿ ಪಾತ್ರವಾಯಿತು.

ಎಂ.ಜಿ.ರಸ್ತೆ ಮೆಟ್ರೊ ರೈಲು ನಿಲ್ದಾಣದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲನಾಥ್, ರೈಲ್ವೆ ಸಚಿವ ದಿನೇಶ್ ತ್ರಿವೇದಿ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮೊದಲ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಆದರೆ ಅದಕ್ಕೂ ಮುನ್ನವೇ ರೈಲು ತುಸು ದೂರ ಚಲಿಸಿ, ಮೊದಲ ಪಯಣಕ್ಕೆ ಆತುರ ತೋರಿತು.

ಗುರುವಾರ ಬೆಳಿಗ್ಗೆ 11.19ಕ್ಕೆ ನಿಲ್ದಾಣದಿಂದ ರೈಲು ಬೈಯಪ್ಪನಹಳ್ಳಿ ಕಡೆಗೆ ಚಲಿಸುತ್ತಿದ್ದಂತೆ `ಮೆಟ್ರೊಗೆ ಜೈ~ ಎಂಬ ಘೋಷಣೆ ಮುಗಿಲು ಮುಟ್ಟಿತು. ಟ್ರಿನಿಟಿ ವೃತ್ತ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ರೈಲು ಬೈಯ್ಯಪ್ಪನಹಳ್ಳಿಗೆ ತಲುಪಿತು. ಮೊದಲ ಪಯಣಕ್ಕೆ ತಗುಲಿದ ಸಮಯ ಸುಮಾರು 15 ನಿಮಿಷ. ನಂತರ ಅಲ್ಲಿಂದ ರೈಲು ವಾಪಸು ಹೊರಟದ್ದು ಎಂ.ಜಿ.ರಸ್ತೆ ನಿಲ್ದಾಣಕ್ಕೆ. ಇದರ ಬೆನ್ನಿಗೆ ಮಾಧ್ಯಮ ಪ್ರತಿನಿಧಿಗಳನ್ನು ಹೊತ್ತು ಮತ್ತೊಂದು ರೈಲು ಪ್ರಯಾಣಿಸಿತು.

ADVERTISEMENT

ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಸಚಿವರಾದ ಆರ್.ಅಶೋಕ, ಎಸ್. ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಜಪಾನ್ ರಾಯಭಾರಿ ಅಕಿತಕ ಸಾಯ್ಕಿ, ಸಂಸದರಾದ ಅನಂತಕುಮಾರ್, ಡಿ.ಬಿ.ಚಂದ್ರೇಗೌಡ, ಪಿ.ಸಿ.ಮೋಹನ್, ಮೇಯರ್ ಪಿ.ಶಾರದಮ್ಮ, ಶಾಸಕರಾದ ವಿಶ್ವನಾಥ್, ಡಿ.ಕೆ.ಶಿವಕುಮಾರ್, ಮತ್ತಿತರರು ಮೊದಲ ಸಂಚಾರದ ಅನುಭವ ಪಡೆದರು.

ಲಭಿಸದ ಅವಕಾಶ: ಆದರೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮಾತ್ರ ಮೆಟ್ರೊ ಮೊದಲ ಸಂಚಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಬಿಇಎಂಎಲ್ ಏರ್ಪಡಿಸಿದ್ದ ಮೆಟ್ರೊಗೆ ಸಂಬಂಧಿಸಿದ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ರೈಲು ಹೊರಟ ನಂತರ ನಿಲ್ದಾಣ ತಲುಪಿದರು.

ಅವಕಾಶ ಕೈತಪ್ಪಿದ್ದರಿಂದ ಆಕ್ರೋಶಗೊಂಡ ಸಚಿವರು, ಬೈಯಪ್ಪನಹಳ್ಳಿ ಸಂಚಾರ ಮುಗಿಸಿ ನಿಲ್ದಾಣಕ್ಕೆ ಸದಾನಂದ ಗೌಡರು ಮರಳುತ್ತಿದಂತೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು. `ನನ್ನನ್ನು ಬಿಟ್ಟು ಪ್ರಯಾಣಿಸಿ ಅವಮಾನ ಮಾಡಿದ್ದೀರಿ. ಈ ಉದ್ದೇಶಕ್ಕೆ ನನ್ನನ್ನು ಸಮಾರಂಭಕ್ಕೆ ಆಹ್ವಾನಿಸಬೇಕಿತ್ತೆ?~ ಎಂದು ಪ್ರಶ್ನಿಸಿದರು.

ಇದರಿಂದ ಕೆಲಕಾಲ ವಿಚಲಿತಗೊಂಡ ಗೌಡರು `ನಿಮಗಾಗಿ ಕಾದೆವು. ಆದರೆ ಸಮಯ ಮೀರಿದ ಕಾರಣ ಹೊರಡಲೇಬೇಕಾಯಿತು. ತಪ್ಪಾಗಿ ಭಾವಿಸದೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು~ ಎಂದು ಕೋರಿದರು. ಇದಕ್ಕೂ ಮುನ್ನ ಎಂ.ಜಿ.ರಸ್ತೆ ಮೆಟ್ರೊ ರೈಲು ನಿಲ್ದಾಣವನ್ನು ಗಣ್ಯರ ಸಮ್ಮುಖದಲ್ಲಿ ಸದಾನಂದ ಗೌಡರು ಉದ್ಘಾಟಿಸಿದರು. ನಂತರ ರೈಲು ಸಂಚರಿಸುವ ಸ್ಥಳದಲ್ಲಿ ಉದ್ಘಾಟನಾ ಫಲಕ ಅನಾವರಣಗೊಳಿಸಲಾಯಿತು.

ಕುತೂಹಲದ ರಸ್ತೆ: ಬೆಳಿಗ್ಗೆಯಿಂದಲೇ ಮೆಟ್ರೊ ಸಂಚಾರ ವೀಕ್ಷಣೆಗಾಗಿ ಜನ ಎಂ.ಜಿ.ರಸ್ತೆಯಲ್ಲಿ ಕಿಕ್ಕಿರಿದು ಸೇರಿದ್ದರು. ಎಲ್ಲರ ಮುಖದಲ್ಲೂ ಚಾರಿತ್ರಿಕ ಘಟನೆಯೊಂದನ್ನು ನೋಡುವ ತವಕ. ನಿಲ್ದಾಣದತ್ತ ಸಾಗಲು ಯತ್ನಿಸುತ್ತಿದ್ದವರ ಉತ್ಸಾಹಕ್ಕೆ ಬ್ರೇಕ್ ಹಾಕಿದ್ದು ಪೊಲೀಸರು.

ಸಡಗರದ ಸ್ವಾಗತ: ಮೂರು ದಿನಗಳ ಹಿಂದೆಯೇ ದೀಪಾಲಂಕೃತವಾಗಿದ್ದ ನಿಲ್ದಾಣ ಗುರುವಾರ ತೆಂಗಿನ ಗರಿಗಳ ಮಂಟಪ ಹಾಗೂ ಬಗೆ ಬಗೆಯ ಹೂವಿನ ಅಲಂಕಾರದೊಂದಿಗೆ ಕಂಗೊಳಿಸಿತು. `ನಮ್ಮ ವೆುಟ್ರೊ~ವನ್ನು ಸಂಕೇತಿಸುವ ಹಸಿರು ಹಾಗೂ ನೇರಳೆ ಬಣ್ಣದ ಬಲೂನು ಹಾಗೂ ಆಲಂಕಾರಿಕ ವಸ್ತುಗಳು ನೋಡುಗರ ಗಮನ ಸೆಳೆದವು. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಜನಪದ ತಂಡಗಳ ನೃತ್ಯ ವಿಶೇಷ ಕಳೆ ತಂದಿತ್ತು.

ಎಂ.ಜಿ.ರಸ್ತೆ, ಕಾಮರಾಜ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆಯಲ್ಲೂ ಸಡಗರ ಮನೆ ಮಾಡಿತ್ತು. ಎಂ.ಜಿ.ರಸ್ತೆ ಡಾಂಬರು ಬಳಿದುಕೊಂಡು ಶೋಭಿಸುತ್ತಿತ್ತು. ಕೆಲವು ಅಂಗಡಿ ಮುಂಗಟ್ಟುಗಳು ಹಾಗೂ ಕಚೇರಿಗಳು ವಿಶೇಷವಾಗಿ ಸಿಂಗಾರಗೊಂಡು ಮೆಟ್ರೊಗೆ ಸ್ವಾಗತ ಕೋರಿದವು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಬ್ರಿಗೇಡ್ ಜಂಕ್ಷನ್‌ವರೆಗೆ ಕೆಲ ಗಂಟೆಗಳ ಕಾಲ ಸಂಚಾರ ನಿಷೇಧಿಸಲಾಗಿತ್ತು.

ಮೊದಲ ಟಿಕೆಟ್ ಗೌರವ: ಸಂಜೆ 4 ಗಂಟೆಗೆ ಮೆಟ್ರೊ ಮೊದಲ ಸಾರ್ವಜನಿಕ ಸೇವೆ ಆರಂಭವಾಯಿತು. ಮೊದಲ ಟಿಕೆಟ್ ಪಡೆದ ಗೌರವಕ್ಕೆ ಹೊಸಕೋಟೆಯ ಅಡಿಕೆ ವ್ಯಾಪಾರಿ ಪಿ.ಗುರುಸಿದ್ದಪ್ಪ ಪಾತ್ರರಾದರು.

ಸಂಜೆ 4ರಿಂದ ರಾತ್ರಿ 10ರವರೆಗೆ ಮೆಟ್ರೊ ಅಧಿಕಾರಿಗಳ ನಿರೀಕ್ಷೆಯನ್ನೂ ಮೀರಿ 50 ಸಾವಿರಕ್ಕೂ ಅಧಿಕ ಪ್ರಯಾಣಿಕರು ಮೆಟ್ರೊ ರೈಲಿನಲ್ಲಿ ಸಂಚರಿಸಿದರು.

ಈ ದಿನವೇ ದೀಪಾವಳಿ: ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರೈಲ್ವೆ ಸಚಿವ ದಿನೇಶ್ ತ್ರಿವೇದಿ, `ಬೆಂಗಳೂರಿಗೆ ದೀಪಾವಳಿ ಹಬ್ಬ ಮೆಟ್ರೊ ರೂಪದಲ್ಲಿ ಮುಂಚಿತವಾಗಿಯೇ ಬಂದಿದೆ. ಈ ದಿನವೇ ದೀಪಾವಳಿ ಆಚರಿಸುತ್ತಿರುವ ಬೆಂಗಳೂರಿನ ಜನರಿಗೆ ನನ್ನ ಶುಭಾಶಯಗಳು~ ಎಂದರು.

`ದೇಶದ ರೈಲ್ವೆ ಪರಿವಾರದ ಭಾಗವಾಗಿರುವ ಮೆಟ್ರೊ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯಾಗಿದೆ. ಭಾರತೀಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲರು ಎಂಬುದಕ್ಕೆ ಮೆಟ್ರೊ ಯೋಜನೆ ಸಾಕ್ಷಿಯಾಗಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.