ರಾಮನಗರ: ಚುನಾವಣಾ ಕೆಲಸ ಕಾರ್ಯಗಳನ್ನು ಎಚ್ಚರಿಕೆ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಚುನಾವಣೆಯು ಶಾಂತಿ ಹಾಗೂ ಮುಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಸೂಚಿಸಿದರು.
ಜಿಲ್ಲಾ ಕಂದಾಯ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ವಿವಿಧ ಸಮಿತಿಗಳ ನೋಡೆಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಇಓ, ತಹಶೀಲ್ದಾರ್‌ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಅಗತ್ಯ ಬಿದ್ದಲ್ಲಿ ವಾರದ ಎಲ್ಲ ದಿನವೂ ದಿನದ 24 ಗಂಟೆ ಕಾರ್ಯನಿರ್ವಹಿಸಬೇಕಿದ್ದು, ಚುನಾವಣಾ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿ ಲೋಪವೆಸಗುವ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಿರುತ್ತದೆ ಎಂದು ಎಚ್ಚರಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸಿ: 18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆದು ಇದುವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳದ ಮತದಾರರನ್ನು ಸೇರ್ಪಡೆಗೊಳಿಸಲು ಹಾಗೂ ಮತದಾರರ ತಿದ್ದುಪಡಿಗಾಗಿ ಭಾನುವಾರ ಜಿಲ್ಲೆಯಾದ್ಯಂತ ವಿಶೇಷ ಆಂದೋಲನವನ್ನು ಹಮ್ಮಿಕೊಂಡು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು 14,436 ಅರ್ಜಿಗಳು ನಮೂನೆ 6 ರಲ್ಲಿ ಸ್ವೀಕೃತಗೊಂಡಿವೆ ಎಂದು ಅವರು ಮಾಹಿತಿ ನೀಡಿದರು.
ಮಾಗಡಿಯಲ್ಲಿ 3,300, ಕನಕಪುರ 3,093, ರಾಮನಗರ 3,671 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 4,372 ನಮೂನೆ 6 ಸ್ವೀಕೃತಗೊಂಡಿವೆ. ವಿಶೇಷ ಆಂದೋಲನದಲ್ಲಿ ಹಾಜರಿರ ಪಿ.ಡಿ.ಓ, ವಿ.ಎ., ಗಳಿಗೆ ನೋಟೀಸ್ ಜಾರಿಮಾಡಲು ಜಿಲ್ಲಾಧಿಕಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಇದೇ 16 ಕಡೆಯ ದಿನ: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಇದೇ 16 ಕಡೆಯ ದಿನವಾಗಿದ್ದು, ಈ ಸ್ವೀಕೃತಗೊಂಡ ಅರ್ಜಿಗಳನ್ನು ಇದೇ 20 ರೊಳಗೆ ದಾಖಲೀಕರಿಸಬೇಕಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರಂತೆ ಅಧಿಕಾರಿಗಳನ್ನು ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ನೇಮಕಗೊಂಡ ಅಧಿಕಾರಿಗಳು: ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ತೋಟಗಾರಿಕಾ ಇಲಾಖಾ ಉಪ ನಿರ್ದೇಶಕಿ ಹೇಮಾ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕ ಸೈಯದ್ ಹುಸೇನ್, ರಾಮನಗರ ಕ್ಷೇತ್ರಕ್ಕೆ ಉದ್ಯೋಗ ವಿನಿಯಮ ಅಧಿಕಾರಿ ಎಸ್.ಜೆ.ಹೇಮಚಂದ್ರ, ಮಹಿಳಾ ಮತ್ತು ಮಕ್ಕಳ ಇಲಾಖಾ ಉಪನಿರ್ದೇಶಕಿ ಚಂದ್ರಾ, ಕನಕಪುರ ಕ್ಷೇತ್ರಕ್ಕೆ ಕೃಷಿ ಇಲಾಖೆ ಕೇಂದ್ರ ಸ್ಥಾನಿಕ ಸಹಾಯಕ ಗೋಪಾಲಗೌಡ, ಡಿಎಸ್.ಡಬ್ಯ್ಲೂ ರಂಗೇ-ಗೌಡ ಹಾಗೂ ಚನ್ನಪಟ್ಟಣ ಕ್ಷೇತ್ರಕ್ಕೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರವಿಶಂಕರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರಸ್ಥಾನದಲ್ಲಿಯೇ ಇರಲು ಸೂಚನೆ: ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಎಲ್ಲಾ ಅಧಿಕಾರಿ ನೌಕರರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಲಭ್ಯರಿರಬೇಕು ಎಂದು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ಕರೆ ಬಂದ ಕೂಡಲೇ ಸ್ವೀಕರಿಸಬೇಕು. ಕೇಂದ್ರ ಸ್ಥಾನ ಬಿಟ್ಟು ಹೋಗಬೇಕಿರುವವರು ನನ್ನ ಅನುಮತಿ ಪಡೆಯಬೇಕಾದದ್ದು ಕಡ್ಡಾಯ ಎಂದು ಅವರು ಹೇಳಿದರು.
ಈಗಾಗಲೇ ಕ್ಷೇತ್ರದ ಹಲವೆಡೆ ಚೆಕ್ಪೋಸ್ಟ್ಗಳನ್ನು ಗುರುತಿಸಿದ್ದು, 25 ‘ಫ್ಲೈಯಿಂದ್ ಸ್ಕ್ವಾಡ್’ ಹಾಗೂ 15 ನೀತಿ ಸಂಹಿತೆ ಜಾರಿ ಘಟಕಗಳನ್ನು ರಚನೆ ಮಾಡಲಾಗಿದೆ ಎಂದ ಅವರು, ಚೆಕ್ಪೋಸ್ಟ್ಗಳಲ್ಲಿ ತಾತ್ಕಾಲಿಕ ಕಟ್ಟಡ ವ್ಯವಸ್ಥೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.
ರಾಜಕೀಯ ಪಕ್ಷಗಳು, ಸಭೆ, ಸಮಾರಂಭ, ಮೆರವಣಿಗೆ, ಮುಂತಾದವುಗಳನ್ನು ಮಾಡಲು ಮುಂಚಿತವಾಗಿ ಅನುಮತಿ ಪಡೆಯುವಂತೆ ತಿಳಿಸಿದ ಅವರು ಚುನಾವಣಾ ಅಧಿಕಾರಿ ಸಿಬ್ಬಂದಿ ನೇರವಾಗಿ ಮಾಧ್ಯಮದೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿ, ‘ಸ್ವೀಪ್’ ಸಂಬಂಧಿಸಿದಂತೆ ಸಿ.ಇ.ಓ, ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಮಾತ್ರ ಮಾಹಿತಿ ನೀಡಬಹುದಾಗಿದೆ ಎಂದು ಅವರು ಸಭೆಯಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಅನುಪಮ್ ಅಗ್ರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಬಸವರಾಜು, ಸಿಪಿಓ ಧನುಷ್, ಜಿ.ಪಂ ಉಪಕಾರ್ಯದರ್ಶಿ ಆರ್.ಲತಾ, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು, ಇ.ಓ ಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಚುನಾವಣಾ ನೋಡೆಲ್ ಅಧಿಕಾರಿಗಳು, ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.