ADVERTISEMENT

ಮೊಬೈಲ್ ಟವರ್‌ಗಳ ಬ್ಯಾಟರಿ ಕಳವು:ಐವರ ಬಂಧನ: 192 ಬ್ಯಾಟರಿ ವಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಬೆಂಗಳೂರು: ಮೊಬೈಲ್ ಟವರ್‌ಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಿರುವ ಹೆಣ್ಣೂರು ಠಾಣೆ ಪೊಲೀಸರು, ಆರೋಪಿಗಳಿಂದ ಒಂಬತ್ತು ಲಕ್ಷ ರೂಪಾಯಿ ಮೌಲ್ಯದ 192 ಬ್ಯಾಟರಿಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿಯ ನಿವಾಸಿಗಳಾದ ಲೋಕೇಶ್ (29), ಮುನಿರಾಜು (29), ನವೀನ್ (23), ಗೋಪಿ (30) ಹಾಗೂ ಸುರೇಶ್ (35) ಬಂಧಿತರು. ಮೊಬೈಲ್ ಟವರ್ ಬ್ಯಾಟರಿಗಳ ಕಳವು ಪ್ರಕರಣ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಪೂರ್ವ ವಿಭಾಗದ ಡಿಸಿಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಏ.3 ರಂದು ಸಂಜೆ ಐದು ಗಂಟೆಗೆ ಅಶ್ವಥ್‌ನಗರ ಬಸ್ ನಿಲ್ದಾಣದ ಬಳಿ ಆರೋಪಿಗಳು ಇರುವುದಾಗಿ ಬಂದ ಖಚಿತ ಮಾಹಿತಿಯಿಂದ ದಾಳಿ ನಡೆಸಿ ಐವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ 25 ಪ್ರಕರಣಗಳು ದಾಖಲಾಗಿವೆ. ಪೂರ್ವ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣಭಟ್ ಅವರ ನೇತೃತ್ವದಲ್ಲಿ, ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಿ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್ ಜಿ.ಪ್ರಭಾಕರ್ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.