ADVERTISEMENT

ಯಂತ್ರಕ್ಕೆ ಹಣ ಹಾಕಿ, ಮೆಟ್ರೊ ಟಿಕೆಟ್ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 20:05 IST
Last Updated 4 ಡಿಸೆಂಬರ್ 2012, 20:05 IST
ಎಂ.ಜಿ.ರಸ್ತೆಯ `ನಮ್ಮ ಮೆಟ್ರೊ' ನಿಲ್ದಾಣದಲ್ಲಿ ಮಂಗಳವಾರ ಉದ್ಘಾಟನೆಗೊಂಡ ಸ್ವಯಂಚಾಲಿತ ಟಿಕೆಟ್ ಯಂತ್ರದ ಮೂಲಕ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್ ಟಿಕೆಟ್ ಪಡೆದರು. ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಇತರರು ಚಿತ್ರದಲ್ಲಿದ್ದಾರೆ.(ಬಲಚಿತ್ರ)ಎಂ.ಜಿ.ರಸ್ತೆಯ ಮೆಟ್ರೊ ಎತ್ತರಿಸಿದ ಮಾರ್ಗದ ಕೆಳಭಾಗದಲ್ಲಿ ಮಂಗಳವಾರ ಕಾರ್ಮಿಕರು ದುರಸ್ತಿ ಕಾರ್ಯ ನಡೆಸಿದರು -ಪ್ರಜಾವಾಣಿ ಚಿತ್ರಗಳು
ಎಂ.ಜಿ.ರಸ್ತೆಯ `ನಮ್ಮ ಮೆಟ್ರೊ' ನಿಲ್ದಾಣದಲ್ಲಿ ಮಂಗಳವಾರ ಉದ್ಘಾಟನೆಗೊಂಡ ಸ್ವಯಂಚಾಲಿತ ಟಿಕೆಟ್ ಯಂತ್ರದ ಮೂಲಕ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್ ಟಿಕೆಟ್ ಪಡೆದರು. ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಇತರರು ಚಿತ್ರದಲ್ಲಿದ್ದಾರೆ.(ಬಲಚಿತ್ರ)ಎಂ.ಜಿ.ರಸ್ತೆಯ ಮೆಟ್ರೊ ಎತ್ತರಿಸಿದ ಮಾರ್ಗದ ಕೆಳಭಾಗದಲ್ಲಿ ಮಂಗಳವಾರ ಕಾರ್ಮಿಕರು ದುರಸ್ತಿ ಕಾರ್ಯ ನಡೆಸಿದರು -ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: `ನಮ್ಮ ಮೆಟ್ರೊ'ದ ಟಿಕೆಟ್ ಪಡೆಯಲು ಇನ್ನು ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಿಲ್ಲ. ಸ್ವಯಂಚಾಲಿತ ಯಂತ್ರದ ಮುಂದೆ ನಿಂತು ಇಳಿಯಬೇಕಾದ ನಿಲ್ದಾಣವನ್ನು ಗುರುತಿಸಿ, ದರ ತುಂಬಿದರೆ ಟಿಕೆಟ್ ನಿಮ್ಮ ಕೈಲಿ!
ವೆುಟ್ರೊದ ಎಂ.ಜಿ.ರಸ್ತೆ ಹಾಗೂ ಬೈಯಪ್ಪನ ಹಳ್ಳಿ ಹಾಗೂ ಇಂದ್ರಾನಗರ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಟಿಕೆಟ್/ ಟೋಕನ್ ಯಂತ್ರವನ್ನು ಮಂಗಳವಾರ ನಗರಾಭಿವೃದ್ಧಿ ಇಲಾಖೆಯ ಮುಖ್ಯಕಾರ್ಯದರ್ಶಿ ಅಮಿತಾ ಪ್ರಸಾದ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, `ನಗರ ಕೇಂದ್ರಿತ ಪ್ರದೇಶಗಳಲ್ಲಿರುವ ಜನರಿಗೆ ಸಾಮಾನ್ಯವಾಗಿ ಸಮಯದ ಅಭಾವವಿರುತ್ತದೆ. ಟಿಕೆಟ್‌ಗಾಗಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಈ ಸ್ವಯಂ ಚಾಲಿತ ಯಂತ್ರ ತಪ್ಪಿಸುತ್ತದೆ.  ಮೆಟ್ರೊ ಜನಸ್ನೇಹಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿರುವುದು ಶ್ಲಾಘನೀಯ' ಎಂದು ಹೇಳಿದರು.

ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ, `ಸದ್ಯಕ್ಕೆ ಮೂರು ವೆುಟ್ರೊ ನಿಲ್ದಾಣಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ. ಯಂತ್ರದ ಬಳಕೆಯ ಕುರಿತು ಪ್ರಯಾಣಿಕರಿಗೆ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ. ಚಿಲ್ಲರೆ ಪಡೆಯುವುದರ ಬಗ್ಗೆಯೂ ಯಾವುದೇ ಸಮಸ್ಯೆ ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಏನಿದು ಸ್ವಯಂಚಾಲಿತ ಯಂತ್ರ?: ಈ ಸ್ವಯಂ ಚಾಲಿತ ಯಂತ್ರದಲ್ಲಿ ರೂ 5 ಹಾಗೂ ರೂ 10 ನಾಣ್ಯಗಳು ಅಥವಾ 10 ರಿಂದ 500 ರೂಪಾಯಿ ಬಳಸಿ ಟಿಕೆಟ್ ಪಡೆಯಬಹುದಾಗಿದೆ.  ಒಬ್ಬ ಪ್ರಯಾಣಿಕ ಒಂದು ಬಾರಿಗೆ 8 ಟೋಕನ್ ಪಡೆಯಬಹುದು. ಪ್ರಯಾಣದ ವೇಳೆ ಹಾಗೂ ದೂರವನ್ನು ಯಂತ್ರ ಟಿಕೆಟ್‌ನಲ್ಲಿ ನಮೂದಿಸುತ್ತದೆ.

ಸ್ಮಾರ್ಟ್ ಕಾರ್ಡ್ ಬಳಕೆಗೂ ಇಲ್ಲಿ ಅವಕಾಶ ನೀಡಲಾಗಿದೆ. ಈ ಯಂತ್ರದಲ್ಲಿ ನಗದು ಮೂಲಕ ಸ್ಮಾರ್ಟ್‌ಕಾರ್ಡ್ ಮೌಲ್ಯ ಹೆಚ್ಚಿಸಿಕೊಳ್ಳಬಹುದು. ಈ ಕಾರ್ಡ್‌ನ ರಿಚಾರ್ಚ್‌ನ ರಸೀತಿಯನ್ನು ಸಹ ಯಂತ್ರದಿಂದ ಪಡೆಯಬಹುದು.ಪ್ರಯಾಣಿಕರ ಅನುಕೂಲಕ್ಕಾಗಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಈ ಹಿಂದೆ ಮೆಟ್ರೊ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ನಾಣ್ಯಗಳ ಬಳಕೆ ಮಾಡಲಾಗುತ್ತಿತ್ತು, ಆದರೆ ಪ್ರಯಾಣಿಕರು ಈ ನಾಣ್ಯವನ್ನು ಕೊಂಡೊಯ್ದ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ ದಂಡ ವಿಧಿಸುವ ನಿಯಮಗಳನ್ನು ಜಾರಿಗೊಳಿಸಿತ್ತು. ಆದರೆ ಈಗ ಈ ಸ್ವಯಂ ಚಾಲಿತ ಯಂತ್ರದ ವ್ಯವಸ್ಥೆಯಿಂದ ಇಂತಹ ಸಮಸ್ಯೆಗಳನ್ನು ನಿವಾರಿಸುವ ಯತ್ನ ಮಾಡಲಾಗಿದೆ.

ಶೀಘ್ರ 2ನೇ ಹಂತ ಆರಂಭ
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ಶಿವಶೈಲಂ, `ಮೂರರಿಂದ ಐದು ತಿಂಗಳ ಒಳಗೆ ಮೆಟ್ರೊ 2ನೇ ಹಂತದ ಕಾಮಗಾರಿಯನ್ನು ಆರಂಭಿಸಲಾಗುವುದು' ಎಂದು ತಿಳಿಸಿದರು.`ಈಗಾಗಲೇ ಈ ಸಂಬಂಧ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದ್ದು, ಯೋಜನಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ 2ನೇ ಹಂತದ ಕಾಮಗಾರಿಯ ಕಡತಗಳಿವೆ. ಒಪ್ಪಿಗೆ ದೊರೆತ ತಕ್ಷಣವೇ ಕಾಮಗಾರಿಗೆ ಚಾಲನೆ ದೊರೆಯಲಿದೆ' ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.