ADVERTISEMENT

ಯಂತ್ರದ ಬಿಡಿಭಾಗ ಬಡಿದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಬೆಂಗಳೂರು: ನಗರದ ಸುಂಕದಕಟ್ಟೆಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಜೀನ್ಸ್ ಪ್ಯಾಂಟ್ ಶೇಡ್ ಮಾಡುವ ಯಂತ್ರದ ಬಿಡಿ ಭಾಗ ತಲೆಗೆ ಹೊಡೆದು ಮಣಿಕುಮಾರ್   ರಾಯ್ (45) ಎಂಬುವರು ಸಾವನ್ನಪ್ಪಿದ್ದಾರೆ.

ಅಸ್ಸಾಂ ಮೂಲದ ಮಣಿಕುಮಾರ್, ಆರು ದಿನಗಳ ಹಿಂದಷ್ಟೆ ನಗರಕ್ಕೆ ಬಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕಾರ್ಖಾನೆಯ ಮಾಲೀಕರು ಇತ್ತೀಚೆಗೆ ಬಟ್ಟೆ ಒಣಗಿಸುವ ಹಾಗೂ ಜೀನ್ಸ್ ಪ್ಯಾಂಟ್‌ಗಳನ್ನು ಶೇಡ್ ಮಾಡುವ ಎಂಟು ಯಂತ್ರಗಳನ್ನು ಶಬೀರ್ ಎಂಬುವರಿಂದ ಖರೀದಿಸಿದ್ದರು.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಯಂತ್ರವೊಂದರಲ್ಲಿ ಪ್ಯಾಂಟ್ ಶೇಡ್ ಮಾಡುತ್ತಿದ್ದ ಮಣಿಕುಮಾರ್ ಅವರ ತಲೆಗೆ ಯಂತ್ರದ ಬಿಡಿಭಾಗ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ತೀವ್ರ ಗಾಯಗೊಂಡ ಅವರನ್ನು ಸಹ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು.

ಆದರೆ, ಮಣಿಕುಮಾರ್ ಮಾರ್ಗ  ಮಧ್ಯೆಯೇ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು. ಯಂತ್ರದಲ್ಲಿನ ಲೋಪದಿಂದ ಈ ದುರ್ಘಟನೆ ನಡೆದಿದ್ದು, ಘಟನೆ ಸಂಬಂಧ ಶಬೀರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT