ನವದೆಹಲಿ: ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮುಂದೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅದಾನಿ ಎಂಟರ್‌ಪ್ರೈಸಸ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಾರ್ಚ್ 20ರಂದು ಮಂಗಳವಾರ ವೈಯಕ್ತಿಕವಾಗಿ, ಇಲ್ಲವೇ ಅಧಿಕೃತ ಪ್ರತಿನಿಧಿ ಮೂಲಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಮಾಜಿ ಮುಖ್ಯಮಂತ್ರಿಗೆ ಸೂಚಿಸಲಾಗಿದೆ. ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಾದ ಜೆಎಸ್‌ಡಬ್ಲ್ಯು ಹಾಗೂ ಎಸ್‌ಡಬ್ಲ್ಯುಎಂಸಿಯಿಂದ ದೇಣಿಗೆ ಪಡೆದ ಆರೋಪಕ್ಕೆ ಯಡಿಯೂರಪ್ಪ ಒಳಗಾಗಿದ್ದಾರೆ. ಉತ್ತರ ಕನ್ನಡದ ಬೇಲಿಕೇರಿ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದ್ದ 5.5 ಲಕ್ಷ ಟನ್ ಅದಿರನ್ನು ಕಳವು ಮಾಡಿ ರಫ್ತು ಮಾಡಿದ ಆರೋಪವನ್ನು ಅದಾನಿ ಎಂಟರ್‌ಪ್ರೈಸಸ್ ಎದುರಿಸುತ್ತಿದೆ.
ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಿಗೆ ಗಣಿ ಗುತ್ತಿಗೆ ಪರವಾನಗಿ ಶಿಫಾರಸು ಮಾಡಲು ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ಪ್ರೇರಣಾ ಟ್ರಸ್ಟ್ ಮತ್ತು ಧವಳಗಿರಿ ಡೆವಲಪರ್ಸ್ ಲಾಭ ಪಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್) ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಎಸ್‌ಪಿಎಸ್ ಆರೋಪ ಕುರಿತು ಪರಿಶೀಲಿಸಿ ಮಾಜಿ ಮುಖ್ಯಮಂತ್ರಿ, ಅವರ ಕುಟುಂಬದ ಸದಸ್ಯರು ಹಾಗೂ ಅದಾನಿ ಎಂಟರ್‌ಪ್ರೈಸಸ್ ವಿರುದ್ಧ ಸಿಬಿಐ ತನಿಖೆ ನಡೆಸುವ ಅಗತ್ಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ನೇತೃತ್ವದ ಅರಣ್ಯ ಪೀಠ ಸಿಇಸಿಗೆ ಸೂಚನೆ ನೀಡಿದೆ.
ಬೆಂಬಲಿಗರಿಂದ ಬೆದರಿಕೆ: ಹಿರೇಮಠ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಸಿಬಿಐ ತನಿಖೆಗೆ ಆದೇಶಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರು ತಮಗೆ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್. ಹಿರೇಮಠ ದೂರಿದರು.
ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಯಡಿಯೂರಪ್ಪ ವಿರುದ್ಧವೂ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ನಾನು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪರೋಕ್ಷವಾಗಿ ಬೆದರಿಕೆ ಹಾಕುವ ಪ್ರಯತ್ನ ನಡೆಸಿದ್ದಾರೆ.
ನನ್ನ ಸ್ನೇಹಿತರನ್ನು ಸಂಪರ್ಕಿಸಿರುವ ಕೆಲವರು, `ನಾವು ಬಂದು ಅವರ ಜೊತೆ ಮಾತನಾಡುತ್ತೇವೆ. ಎಲ್ಲವನ್ನೂ ಇತ್ಯರ್ಥ ಮಾಡಿಕೊಳ್ಳೋಣ. ಇಲ್ಲವಾದರೆ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ~ ಎಂಬ ಸಂದೇಶ ರವಾನಿಸಿದ್ದಾರೆ~ ಎಂದರು.
`ಯಡಿಯೂರಪ್ಪ ಅವರ ಬೆಂಬಲಿಗರು ನೀಡಿರುವ ಬೆದರಿಕೆ ಸಂದೇಶವನ್ನು ತಕ್ಷಣವೇ ನನ್ನ ಸ್ನೇಹಿತರು ನನಗೆ ತಿಳಿಸಿದರು. ಎಚ್ಚರಿಕೆಯಿಂದ ಇರುವಂತೆಯೂ ಹೇಳಿದರು. ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಬಗ್ಗೆ ಯೋಚಿಸಿಲ್ಲ. ನಾನು ಅಹಿಂಸಾ ಮಾರ್ಗದಲ್ಲಿ ನಂಬಿಕೆ ಇಟ್ಟವನು~ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.