ADVERTISEMENT

ಯಡಿಯೂರಪ್ಪ ಮನೆಗೆ ತೆರಳಿ ಹೇಳಿಕೆ ಪಡೆಯುವ ಸಾಧ್ಯತೆ

ವಿನಯ್ ಮೇಲೆ ಹಲ್ಲೆ, ಅಪಹರಣ ಯತ್ನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮಾಧ್ಯಮ ಸಂಚಾಲಕ ವಿನಯ್ ಮೇಲೆ ಹಲ್ಲೆ ಹಾಗೂ ಅಪಹರಣ ಯತ್ನ ಪ್ರಕರಣ ಸಂಬಂಧ ಮಲ್ಲೇಶ್ವರ ವಿಭಾಗದ ಪೊಲೀಸರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಹೋಗಿ ಹೇಳಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.

66 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು, ಅವರಿರುವ ಜಾಗಕ್ಕೆ ಹೋಗಿ ಹೇಳಿಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಈ ಆಧಾರದಲ್ಲಿ ಯಡಿಯೂರಪ್ಪ ಮನೆಗೆ ತೆರಳಿ ಹೇಳಿಕೆ ಪಡೆಯುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಯಡಿಯೂರಪ್ಪ ಅವರ ಮನೆಗೆ ತೆರಳಿ ಹೇಳಿಕೆ ಪಡೆಯುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ತನಿಖಾಧಿಕಾರಿಗಳು ಈ ಸಂಬಂಧ ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ADVERTISEMENT

ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಹೆಸರು ಕೇಳಿಬಂದಿದೆ. ಹೀಗಾಗಿ, ತನಿಖಾಧಿಕಾರಿ ಮಲ್ಲೇಶ್ವರ ಎಸಿಪಿ ಆನಂದ್ ಬಡಿಗೇರ್ ಅವರು, ಕೆಲ ದಿನಗಳ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದರು. ಅದಕ್ಕೆ ವಕೀಲರ ಮೂಲಕ ಉತ್ತರಿಸಿದ್ದ ಯಡಿಯೂರಪ್ಪ, ‘ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಆದರೆ, ಕಾನೂನಿನ ಪ್ರಕಾರ ಮನೆಗೆ ಬಂದು ಹೇಳಿಕೆ ಪಡೆಯುವುದಾದರೆ ನಾನು ಮಾಹಿತಿ ನೀಡುತ್ತೇನೆ’ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.