ADVERTISEMENT

ಯಾಮಾರಿದರೆ ‘ಯಮರೆ’ ಮಾಯ!

ಕೆರೆಯಲ್ಲೀಗ ಇರುವುದು ತ್ಯಾಜ್ಯ ಮಾತ್ರ *ಕಟ್ಟಡ ನಿರ್ಮಾಣಕ್ಕೆ ಜಲಮೂಲದಲ್ಲಿಯೇ ಕಚ್ಚಾ ರಸ್ತೆ

ಆರ್‌.ಜೆ.ಯೋಗಿತಾ
Published 30 ಮಾರ್ಚ್ 2018, 20:08 IST
Last Updated 30 ಮಾರ್ಚ್ 2018, 20:08 IST
ಯಮರೆ ಸುರಿದಿರುವ ಕಟ್ಟಡ ತ್ಯಾಜ್ಯ
ಯಮರೆ ಸುರಿದಿರುವ ಕಟ್ಟಡ ತ್ಯಾಜ್ಯ   

ಬೆಂಗಳೂರು: ಬೇಸಿಗೆಯಲ್ಲೂ ತನ್ನ ಒಡಲೊಳಗೆ ಒಂದಿಷ್ಟು ನೀರು ಇಟ್ಟುಕೊಂಡಿರುತ್ತಿದ್ದ ಸರ್ಜಾಪುರ ಬಳಿಯ ‘ಯಮರೆ’ ಕೆರೆಯಲ್ಲೀಗ ಇರುವುದು ತ್ಯಾಜ್ಯ ಮಾತ್ರ. ನಿಧಾನಕ್ಕೆ ಒತ್ತುವರಿ ಪರ್ವ ಶುರುವಾಗಿದ್ದು, ಕೊಂಚ ಎಚ್ಚರ ತಪ್ಪಿದರೂ ಕೆರೆಯೇ ಮಾಯವಾಗಬಹುದು!

ಆನೇಕಲ್‌ ತಾಲ್ಲೂಕಿನ ಯಮರೆ ಗ್ರಾಮದ ಸರ್ವೆ ಸಂಖ್ಯೆ 135ರಲ್ಲಿರುವ ಈ ಕೆರೆ 21 ಎಕರೆ 21 ಗುಂಟೆ ವಿಸ್ತೀರ್ಣ ಹೊಂದಿದೆ. ಕೆರೆಯಂಗಳದಲ್ಲಿ ರಸ್ತೆಯೊಂದಿದೆ. ಇದರ ಮೀಸಲು ಪ್ರದೇಶದಲ್ಲಿ ಕಟ್ಟಡವೊಂದು (ಚರ್ಚ್) ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಜಲಮೂಲದಲ್ಲಿಯೇ ಕಚ್ಚಾ ರಸ್ತೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಲಮೂಲದ 75 ಮೀಟರ್ ಮೀಸಲು ಪ್ರದೇಶದೊಳಗೆ ಅಭಿವೃದ್ಧಿ ಕಾಮಗಾರಿ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರ ಮೇ ತಿಂಗಳಲ್ಲಿ ಆದೇಶಿಸಿತ್ತು. ಆದರೆ, ಇಲ್ಲಿ ಪಾಲನೆ ಮಾತ್ರ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸಂಪಂಗಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇದೊಂದು ಚೆಂದದ ಕೆರೆಯಾಗಿತ್ತು. ದಶಕಗಳ ಹಿಂದೆ ಗ್ರಾಮದವರೆಲ್ಲರೂ ಈ ಜಲಮೂಲಕ್ಕೆ ಅವಲಂಬಿತರಾಗಿದ್ದರು. ಜಾನುವಾರುಗಳಿಗೆ ನೀರು ಕುಡಿಸಲು ಇಲ್ಲಿಗೆ ಬರುತ್ತಿದ್ದೆವು. ಸಾಕಷ್ಟು ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿದ್ದವು. ನೋಡುತ್ತಿದ್ದಂತೆಯೇ ಈ ಕೆರೆ ಆವರಣ ಕರಗುತ್ತಾ ಹೋಯಿತು...’ ಎಂದು ಅವರು ಕೆರೆಯೊಂದಿಗಿನ ನೆನಪನ್ನು ಬಿಚ್ಚಿಟ್ಟರು.

‘ಜಲಮೂಲದಲ್ಲಿ ಈಗ ಜೊಂಡು ಬೆಳೆದಿದೆ. ಕೆರೆಗಳ ಹೂಳು ತೆಗೆಯುವ ಕಾರ್ಯ ಎಲ್ಲೆಡೆ ನಡೆಯುತ್ತಿದ್ದರೆ, ನಮ್ಮೂರ ಕೆರೆಯ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಕಟ್ಟಡ ತ್ಯಾಜ್ಯಗಳನ್ನು ತಂಬುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯಿಂದ ಕೂಗಳತೆ ದೂರದಲ್ಲಿ ಈ ಕೆರೆ ಇದೆ. ಆದರೂ, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ದೂರಿದರು. 

ದೂರು ಕೊಟ್ಟರೂ ಪ್ರಯೋಜನವಾಗಿಲ್ಲ: ಮೀಸಲು ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ‘ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ’ ಎಂದು ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದರು. ಈ ಬಗ್ಗೆ ತಹಶೀಲ್ದಾರ್‌ಗೆ ದೂರು ನೀಡಿದ್ದೇವೆ’ ಎಂದು ಕೆರೆ ಉಳಿಸಲು ಹೋರಾಡುತ್ತಿರುವ ದೀಪಾಂಜಲಿ ತಿಳಿಸಿದರು.

‘ಜಲಮೂಲದ ಪಕ್ಕದಲ್ಲಿ ಕ್ರೈಸ್ತರ ಸ್ಮಶಾನಕ್ಕೆ ಗ್ರಾಮ ಪಂಚಾಯಿತಿಯಿಂದ ಜಾಗ ನೀಡಲಾಗಿದೆ. ಕಟ್ಟಡ ನಿರ್ಮಾಣ ಆಗುತ್ತಿರುವ ಯಾವುದೇ ಬಗ್ಗೆ ಮಾಹಿತಿ ಇಲ್ಲ’ ಎಂದು ಗ್ರಾಮಲೆಕ್ಕಿಗ ಮೋಹನ್‌ ತಿಳಿಸಿದರು.

‘ಇದರ ಪಕ್ಕದಲ್ಲಿರುವ ಸೋಂಪುರ ಕೆರೆಯಲ್ಲಿ ಒತ್ತುವರಿಯಾಗಿತ್ತು. ಅದನ್ನು ತೆರವುಗೊಳಿಸಿದ್ದೇವೆ. ಜೊತೆಗೆ ನಡಿಗೆ ಪಥ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಯಮರೆ ಕೆರೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಒತ್ತುವರಿಯೂ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಸ್ತೆ ಜಾಗ ಒತ್ತುವರಿ
‘ಕೆರೆಯ ಪಕ್ಕದಲ್ಲೇ ರಸ್ತೆ ಇದೆ. ಆ ಜಾಗವನ್ನು ಒತ್ತುವರಿ ಮಾಡಿ ಚರ್ಚ್‌ನ ಕಾಂಪೌಂಡ್‌ ನಿರ್ಮಿಸಲಾಗಿದೆ. ಇತ್ತೀಚೆಗೆ ಸರ್ವೆ ಮಾಡಿದಾಗ ಈ ವಿಷಯ ತಿಳಿಯಿತು’ ಎಂದು ಯಮರೆ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್‌ ತಿಳಿಸಿದರು.

‘2013ಕ್ಕಿಂತ ಹಿಂದೆ ಜಾಗ ಖರೀದಿ ಮಾಡಿದ್ದರೆ, 35 ಮೀಟರ್‌ ಮೀಸಲು ಪ್ರದೇಶ ಬಿಡಬೇಕಿತ್ತು. ಜಾಗವನ್ನು ಯಾವಾಗ ಖರೀದಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ, ಒತ್ತುವರಿ ತೆರವು ಮಾಡಿಸಲಾಗುವುದು’ ಎಂದು ಹೇಳಿದರು.

‘ಸೋಂಪುರ ಕೆರೆಯಲ್ಲಿ ರಸ್ತೆ ಕಾನೂನುಬದ್ಧ’
‘ಸೋಂಪುರ ಕೆರೆ ಪಕ್ಕದಲ್ಲಿ ಕಾನೂನುಬದ್ಧವಾಗಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಜಲಮೂಲಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ರಸ್ತೆ ನಿರ್ಮಿಸಲಾಗಿದೆ. ಎತ್ತರದಲ್ಲಿ ರಸ್ತೆ ಮಾಡಿರುವುದರಿಂದ ಹೆಚ್ಚು ನೀರು ನಿಲ್ಲಲು ಅನುಕೂಲವಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್‌ ವಿವರಿಸಿದರು.

‘ಗ್ರಾಮದಲ್ಲಿ ಅಗಲದ ರಸ್ತೆ ಇರಲಿಲ್ಲ. ಅಲ್ಲದೆ, ಕೆರೆಯಲ್ಲಿ ಕಾಲುದಾರಿ ಇತ್ತು. ನಾವು ಅದನ್ನೇ ಅಭಿವೃದ್ಧಿ ಪಡಿಸಿದ್ದೇವೆ. 14 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೆರೆಯಲ್ಲಿಯೂ ಮೀಸಲು ಪ್ರದೇಶದ ಉಲ್ಲಂಘನೆಯಾಗಿಲ್ಲ’ ಎಂದರು.

*
ಸರ್ಜಾಪುರ ಸುತ್ತಮುತ್ತ ಪ್ರದೇಶಗಳಲ್ಲಿ 26 ಕೆರೆಗಳಿವೆ. ನಿವಾಸಿಗಳ ಗುಂಪು ರಚಿಸಿಕೊಂಡು ಅವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.
–ವಿಕಾಸ್‌, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.