ADVERTISEMENT

ಯು.ವಿ.ಸಿಂಗ್ ಮೇಲೆ ಹಲ್ಲೆ ಪ್ರಕರಣ: ಬಿಬಿಎಂಪಿ ಸದಸ್ಯ ಭಾಗಿ; ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:15 IST
Last Updated 21 ಫೆಬ್ರುವರಿ 2011, 19:15 IST

ಬೆಂಗಳೂರು:  ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ.ಯು.ವಿ.ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿಬಿಎಂಪಿ ಸದಸ್ಯ ಎನ್.ಚಂದ್ರ ಭಾಗಿಯಾಗಿರುವುದು ದೃಢಪಟ್ಟಿದೆ. ಅವರ ಸಹೋದರ ಸೇರಿದಂತೆ ಇಬ್ಬರನ್ನು ಅಮೃತಹಳ್ಳಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ರಾಮಸ್ವಾಮಿಪಾಳ್ಯ ವಾರ್ಡ್ ಸದಸ್ಯ ಚಂದ್ರ ಅವರ ಸಹೋದರ ಶರವಣನ್ (32) ಮತ್ತು ಮುನಿರೆಡ್ಡಿಪಾಳ್ಯದ ಮಂಜು ಅಲಿಯಾಸ್ ಭರತ್‌ಸಿಂಗ್ (27) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಚಂದ್ರ ಮತ್ತು ಆತನ ಏಳು ಸಹಚರರು ಸಿಂಗ್ ಅವರ ಮೇಲೆ ಹಲ್ಲೆ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಬಳಸಿದ ಕಾರನ್ನು (ನೋಂದಣಿ ಸಂಖ್ಯೆ ಕೆ.ಎ-03, ಎಂ.ಎಸ್-2088) ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಂದ್ರ ಮತ್ತು ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ ಆರೋಪಿಗಳ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಶಕ್ಕೆ ತೆಗೆದುಕೊಂಡು ಅವರ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುತ್ತದೆ’ ಎಂದು ಅವರು ಹೇಳಿದರು.

ಈಶಾನ್ಯ ವಿಭಾಗದ ಡಿಸಿಪಿ ಬಿ,ಆರ್.ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ರಾಮಚಂದ್ರಪ್ಪ ಮತ್ತು ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.

ಜಲಮಂಡಳಿ ವಿರುದ್ಧವೂ ಪ್ರಕರಣ?: ನಾಗವಾರ ಕೆರೆ ಬಳಿ ಇರುವ ಜಲಮಂಡಳಿಗೆ ಸೇರಿದ ಕೊಳಚೆ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಬಳಸಿಕೊಂಡು ಆರೋಪಿಗಳು ಅಪಾಯಕಾರಿ ಕೈಗಾರಿಕಾ ತ್ಯಾಜ್ಯವನ್ನು ಕೆರೆಗೆ ಬಿಡುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯ ಕೆಲ ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

‘ಮೂರು ವರ್ಷಗಳಿಂದ ನಿರಂತರವಾಗಿ ಅಪಾಯಕಾರಿ ತ್ಯಾಜ್ಯವನ್ನು ಕೆರೆಗೆ ಸುರಿಯಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಪ್ರದೇಶ ಸಂಪೂರ್ಣವಾಗಿ ಜಲಮಂಡಳಿ ಸ್ವಾಧೀನದಲ್ಲಿದೆ. ಜಲಮಂಡಳಿ ಅಧಿಕಾರಿಗಳ ಸಮ್ಮತಿ ಇಲ್ಲದೇ ಒಳಕ್ಕೆ ಬರಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಕೃತ್ಯದಲ್ಲಿ ಕೆಲ ಅಧಿಕಾರಿಗಳ ಕೈವಾಡ ಇರುವ ಬಗ್ಗೆಯೂ ಸಾಕ್ಷ್ಯಗಳು ಲಭ್ಯವಾಗುತ್ತಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರತೀಯ ಜಲ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 120-ಬಿ ಅಡಿಯಲ್ಲಿ ಜಲಮಂಡಳಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಈ ಕುರಿತು ಗಂಭೀರ ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸರು ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.

ಒತ್ತಡಕ್ಕೆ ಮಣಿಯುವುದಿಲ್ಲ: ‘ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳು ಎಷ್ಟೇ ಪ್ರಬಲರಾಗಿದ್ದರೂ ಒತ್ತಡಕ್ಕೆ ಮಣಿಯದೆ ಅವರೆಲ್ಲರನ್ನು ಬಂಧಿಸುತ್ತೇವೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.