ADVERTISEMENT

ಯುವ ಕಾಂಗ್ರೆಸ್‌ ಚುನಾವಣೆ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮೇ 2017, 20:09 IST
Last Updated 18 ಮೇ 2017, 20:09 IST

ಬೆಂಗಳೂರು: ನಗರ ಯುವ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ಭವನದ ಮುಂಭಾಗದಲ್ಲಿ ಗದ್ದಲ ನಡೆಸಿದರು.

ಜಿಲ್ಲಾ ಮತ್ತು ನಗರ ಘಟಕಗಳ ಪದಾಧಿಕಾರಿಗಳ ಆಯ್ಕೆ ಸಂಬಂಧದ ಮತ ಎಣಿಕೆ ಗುರುವಾರ ನಡೆಯಿತು. ಚುನಾವಣಾ ಅಧಿಕಾರಿಯೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗುಂಪೊಂದು ಆರೋಪಿಸಿತು.

‘ಚುನಾವಣೆಯಲ್ಲಿ 1.05 ಲಕ್ಷ ಮತ ಚಲಾವಣೆ ಆಗಿದೆ ಎಂದು ಬುಧವಾರ ಹೇಳಿಕೆ ನೀಡಿದ್ದ ಚುನಾವಣಾಧಿಕಾರಿ, ಗುರುವಾರ 1.40 ಲಕ್ಷ ಎಂದು ಮಾತು ಬದಲಿಸಿದ್ದಾರೆ.  ಹೆಚ್ಚುವರಿ ಮತಗಳು ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿ, ಕೆಲವು ಕಾರ್ಯಕರ್ತರು ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿದರು.

ADVERTISEMENT

‘ಮತಪೆಟ್ಟಿಗೆಗಳ ಒಳಗೆ ನಕಲಿ ಮತಪತ್ರಗಳನ್ನು ಸೇರಿಸಲಾಗಿದೆ.  ಹೀಗಾಗಿ  ಇಡೀ  ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಬೇಕು’ ಎಂದು ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮತ ಎಣಿಕೆ ನಡೆಯುತ್ತಿದ್ದ ಕೊಠಡಿಗೆ ನುಗ್ಗಿದ ಗುಂಪೊಂದು ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮುಂದಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಕಾರಣಕ್ಕೆ ಸುಮಾರು 4 ಗಂಟೆ ಕಾಲ ಮತ ಎಣಿಕೆ  ಸ್ಥಗಿತಗೊಂಡಿತು.

ಹಿರಿಯ ನಾಯಕರ ಗುಂಪೊಂದು ಚುನಾವಣಾ ಅಕ್ರಮಕ್ಕೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿ  ಚುನಾವಣಾ ಕಣದಲ್ಲಿರುವವರ ಬೆಂಬಲಿಗರು ಭಾರತೀಯ ಯುವ ಕಾಂಗ್ರೆಸ್‌ ಘಟಕಕ್ಕೆ ಇತ್ತೀಚೆಗೆ ದೂರು ನೀಡಿದ್ದರು.

ಯುವ ಕಾಂಗ್ರೆಸ್‌ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗೆ ಪದಾಧಿಕಾರಿಗಳ ಆಯ್ಕೆಗೆ ಮೇ 14ರಿಂದ 16ರವರೆಗೆ ಚುನಾವಣೆ ನಡೆದಿತ್ತು. ರಾಜ್ಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇದೇ 20ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.