ADVERTISEMENT

ಯುವ ಪೀಳಿಗೆ ಜ್ಞಾನದ ಆಗರ: ಕಲಾಂ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST
ಯುವ ಪೀಳಿಗೆ ಜ್ಞಾನದ ಆಗರ: ಕಲಾಂ
ಯುವ ಪೀಳಿಗೆ ಜ್ಞಾನದ ಆಗರ: ಕಲಾಂ   

ಬೆಂಗಳೂರು: `ಅಪರಿಮಿತ ಜ್ಞಾನ ಹಾಗೂ ಸೃಜನಶೀಲ ಮನೋಭಾವ ಇಂದಿನ ಯುವ ಪೀಳಿಗೆಯಲ್ಲಿ ಸಾಮಾನ್ಯವಾಗಿದ್ದು, ಏನನ್ನಾದರೂ ಸಾಧಿಸುವ ಛಲ ಅವರನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತಿದೆ~ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಭಿಪ್ರಾಯಪಟ್ಟರು.


ರಾಜ್ಯ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಟಾಟಾ ಕನ್ಸಲ್ಟನ್ಸಿ ಸಹಯೋಗದಲ್ಲಿ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗುರುವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳು ಕಲಾಂ ಮೇಷ್ಟ್ರ ಮಾತುಗಳನ್ನು ಆಸಕ್ತಿಯಿಂದ ಕೇಳಿದರು.
`ಗ್ರಾಮೀಣ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ವಿಷಯವಾಗಿ ಜಾಗೃತಿ ಮೂಡಿಸಲು ಈ ಸ್ಪರ್ಧೆಯನ್ನು ಸಂಘಟಿಸಲಾಗಿತ್ತು.  ಮುಂದಿನ ವರ್ಷ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸ್ಪರ್ಧೆ ನಡೆಸಲು ಯತ್ನಿಸಲಾಗುವುದು~ ಎಂದು ಐಟಿ, ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಹೇಳಿದರು.

ಬಹುಮಾನಿತರು: ಅಂತಿಮ ಸುತ್ತಿನಲ್ಲಿ ವಡೋದರದ ಸಂತ ಕಬೀರ್ ಶಾಲೆಯ ದಿಗಂತ್ ಬಕರಿ ಮತ್ತು ಹರ್ಷಿಲ್ ವೈದ್ಯ ಮೊದಲ ಬಹುಮಾನ ಗೆದ್ದುಕೊಂಡರು. ಟ್ರೋಫಿ ಜೊತೆಗೆ ಲಕ್ಷ ರೂಪಾಯಿ ಬಹುಮಾನವನ್ನೂ ಅವರು ಜೇಬಿಗಿಳಿಸಿದರು. ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಶಾಲೆಯ ಅಭಿಷೇಕ್ ರಾವ್, ಸ್ವಸ್ತಿಕ್ ಉಡುಪ ದ್ವಿತೀಯ ಸ್ಥಾನಕ್ಕೆ (ರೂ50 ಸಾವಿರ)ತೃಪ್ತಿಪಡಬೇಕಾಯಿತು.  ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದ ಎಲ್ಲ ಆರೂ ತಂಡಗಳು ಸೆಲ್‌ಫೋನ್, ವೈರ್‌ಲೆಸ್ ಕೀ ಬೋರ್ಡ್,  ಮೌಸ್ ಮತ್ತು ಪೆನ್‌ಡ್ರೈವ್‌ಗಳನ್ನು ಉಡುಗೊರೆಯಾಗಿ ಪಡೆದವು. ಸಚಿವ ಅಪ್ಪಚ್ಚು ರಂಜನ್, ಟಿಸಿಎಸ್ ಫೈನಾನ್ಶಿಯಲ್ ಸಲ್ಯುಷನ್ಸ್ ಅಧ್ಯಕ್ಷಎನ್. ಗಣಪತಿ ಸುಬ್ರಹ್ಮಣ್ಯಂ, ಟಿಸಿಎಸ್ ಉಪಾಧ್ಯಕ್ಷ ನಾಗರಾಜ್ ಇಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT