ADVERTISEMENT

ರಕ್ತನಾಳ ಒಡೆಯದಂತೆ ಪ್ಲಾಟಿನಂ ತಡೆಗೋಡೆ!

ನಾರಾಯಣ ಹೆಲ್ತ್‌ಸಿಟಿ ಅಪರೂಪದ ಸಾಧನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:14 IST
Last Updated 20 ಡಿಸೆಂಬರ್ 2013, 20:14 IST

ಬೆಂಗಳೂರು: ಬಲೂನಿನಂತೆ ಊದಿಕೊಂಡು ಒಡೆಯುವ ಸ್ಥಿತಿ­ಯಲ್ಲಿದ್ದ ಯುವತಿಯೊಬ್ಬಳ ಮಿದುಳಿನ ರಕ್ತನಾಳದ ಭಾಗ­ವನ್ನು ‘ವೈ ಸ್ಟೆಂಟ್‌ ಅಸಿಸ್ಟಡ್‌ ಕಾಯ್ಲಿಂಗ್‌’ ಚಿಕಿತ್ಸಾ ವಿಧಾನ­ದಿಂದ ದುರಸ್ತಿಗೊಳಿಸುವ ಮೂಲಕ ನಗರದ ನಾರಾಯಣ ಹೆಲ್ತ್‌ಸಿಟಿ ಅಪರೂಪದ ಸಾಧನೆ ಮಾಡಿದೆ.

‘ಮಿದುಳಿನಲ್ಲಿ ಅದಾಗಲೇ ಆರಂಭವಾಗಿದ್ದ ರಕ್ತಸ್ರಾವ­ವನ್ನು ಈ ಚಿಕಿತ್ಸೆಯಿಂದ ಯಶಸ್ವಿಯಾಗಿ ತಡೆಗಟ್ಟಲಾಗಿದ್ದು, ಚಿಕಿತ್ಸೆ ಪಡೆದಿದ್ದ ಯುವತಿ ಈಗ ಗುಣಮುಖ­ರಾಗಿದ್ದಾರೆ’ ಎಂದು ಚಿಕಿತ್ಸೆ ನೀಡಿದ, ನಾರಾಯಣ ಹೆಲ್ತ್‌ಸಿಟಿಯ ನರವಿಜ್ಞಾನ, ಪಾರ್ಶ್ವವಾಯು ವಿಭಾಗದ ಮುಖ್ಯಸ್ಥ ಡಾ. ವಿಕ್ರಮ್‌ ಹುಡೇದ ತಿಳಿಸಿದರು.

‘ಊದಿಕೊಂಡ ನಾಳದ ಭಾಗವು ರಕ್ತದೊತ್ತಡದಿಂದ ಯಾವುದೇ ಕ್ಷಣದಲ್ಲಿ ಒಡೆಯುವ ಸಾಧ್ಯತೆ ಇರುತ್ತದೆ. ಅದ­ರಿಂದ ಮಿದುಳಿನಲ್ಲಿ ರಕ್ತಸ್ರಾವವಾಗಿ ರೋಗಿಯು ಸಾವನ್ನ­ಪ್ಪುವ ಸಂಭವ ಹೆಚ್ಚಾಗಿರುತ್ತದೆ. ಊದಿಕೊಂಡ ಭಾಗದಲ್ಲಿ ವೈ ಸ್ಟೆಂಟ್‌ ಮೂಲಕ ಪ್ಲಾಟಿನಂ ಲೋಹದ ಸುರಳಿಗಳನ್ನು ತುಂಬ­ಲಾಗುತ್ತದೆ. ಬಲೂನಿನ ದ್ವಾರವನ್ನೂ ಇದೇ ಲೋಹ­ದಿಂದ ಬಂದ್‌ ಮಾಡಲಾಗುತ್ತದೆ. ಆಗ ನಾಳ ಒಡೆದು ರಕ್ತ­ಸ್ರಾವ ಆಗುವ ಅಪಾಯ ತಪ್ಪುತ್ತದೆ’ ಎಂದು ವಿವರಿಸಿದರು.

‘ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಯುವತಿ, ಮೂರ್ಛೆರೋಗಕ್ಕೂ ತುತ್ತಾಗಿದ್ದರು. ಸಿ.ಟಿ ಸ್ಕ್ಯಾನ್‌ ಮಾಡಿದಾಗ ಮಿದುಳಿನಲ್ಲಿ ರಕ್ತಸ್ರಾವ ಆಗಿದ್ದಲ್ಲದೆ, ರಕ್ತನಾಳ ಊದಿಕೊಂಡಿದ್ದು ಪತ್ತೆಯಾಯಿತು. ತಲೆಯಲ್ಲಿ ಕಿರುಗಾತ್ರದ ತೂತು ಕೊರೆಯುವ ಮೂಲಕ ಅತ್ಯಂತ ಸೂಕ್ಷ್ಮವಾಗಿದ್ದ ಚಿಕಿತ್ಸೆಯನ್ನು ನೀಡಲಾಯಿತು’ ಎಂದು ತಿಳಿಸಿದರು. ‘ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಚಿಕಿತ್ಸೆ ನೀಡಲಾಗಿದೆ. ಶಸ್ತ್ರ ಚಿಕಿತ್ಸೆ ಮೂಲಕವೂ ಈ ಸಮಸ್ಯೆಯನ್ನು ನಿವಾರಿಸಬಹುದು. ಆದರೆ, ಆ ವಿಧಾನದಲ್ಲಿ ಜೀವಕ್ಕೆ ಅಪಾಯ ಹೆಚ್ಚು’ ಎಂದು ಹೇಳಿದರು.

ಡಾ.ತಿಮ್ಮಪ್ಪ ಹೆಗಡೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.