ADVERTISEMENT

ರತ್ನಪ್ರಭಾ ವಿರುದ್ಧ ಜೆಡಿಎಸ್‌ ದೂರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:03 IST
Last Updated 4 ಏಪ್ರಿಲ್ 2018, 20:03 IST

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್‌ ಅವರಿಗೆ ಜೆಡಿಎಸ್‌ ದೂರು ನೀಡಿದೆ.

ಬುಧವಾರ ಸಂಜೆ ಆಯುಕ್ತರನ್ನು ಭೇಟಿ ಮಾಡಿದ ಜೆಡಿಎಸ್‌ ನಿಯೋಗ, ರತ್ನಪ್ರಭಾ ಅವರ ಸೇವಾ ಅವಧಿ ಮಾರ್ಚ್‌ 31ಕ್ಕೆ ಕೊನೆಯಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರೂ, ಕಾಂಗ್ರೆಸ್‌ ಪಕ್ಷ ರತ್ನಪ್ರಭಾ ಅವಧಿಯನ್ನು ಉದ್ದೇಶ ಪೂರ್ವಕವಾಗಿ ಮೂರು ತಿಂಗಳು ಕಾಲ ಮುಂದುವರಿಸಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿತು.

ನೀತಿ ಸಂಹಿತೆ ಜಾರಿಯಾದ ದಿನವೇ ರಾತ್ರಿ (ಮಾರ್ಚ್‌ 27) ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ನೂರಾರು ಕೋಟಿ ಖರ್ಚು ಮಾಡಿ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದು, ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವುದಾಗಿ ಪಕ್ಷದ ವಕ್ತಾರ ರಮೇಶ್‌ ಬಾಬು ತಿಳಿಸಿದರು.

ADVERTISEMENT

ಕಾಂಗ್ರೆಸ್ ಸರ್ಕಾರ ವಿವಿಧ ನಿಗಮ, ಮಂಡಳಿ, ಆಯೋಗ ಮತ್ತು ಇಲಾಖೆಗಳ ಅಧ್ಯಕ್ಷರು, ನಿರ್ದೇಶಕರು ಸಲಹೆಗಾರರು ಈಗಲೂ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ವಾಹನ ಹಿಂತಿರುಗಿಸದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಹಳ ಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬದಲಾಯಿಸದೇ ಅಲ್ಲೇ ಉಳಿಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗವು ಗಮನ ಹರಿಸಲಿಲ್ಲ. ಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮಾಹಿತಿ ನೀಡಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಅಧಿಕಾರಿಗಳ ಬಗ್ಗೆ ಆಯೋಗಕ್ಕೆ ಗೋಪ್ಯ ಮಾಹಿತಿ ನೀಡಲು ಸಿದ್ಧ ಎಂದು ಅವರಿಗೆ ತಿಳಿಸಿದ್ದೇವೆ ಎಂದರು.

ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊಳ್ಳೆಗಾಲದ ಸಮೀಪ ಕುಮಾರಸ್ವಾಮಿ ವಾಹನ ತಡೆದು ಕಿರುಕುಳ ನೀಡಿದ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ರಮೇಶ್‌ ಬಾಬು ತಿಳಿಸಿದರು.

₹1.32 ಕೋಟಿ ಮೌಲ್ಯದ ಮದ್ಯ ವಶ
ಬೆಂಗಳೂರು: ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ₹1.32 ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿ 3,433.67 ಲೀಟರ್‌ ವಿವಿಧ ರೀತಿಯ ಮದ್ಯವನ್ನು ಸಾಗಿಸಲಾಗುತ್ತಿತ್ತು ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ₹ 4.60 ಲಕ್ಷ ನಗದು, ₹ 3.45 ಲಕ್ಷ ಮೌಲ್ಯದ ಅಕ್ಕಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ₹ 42,74,700 ಮೌಲ್ಯದ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ವಿಮೆ ಬಾಂಡ್‌, ಕರ ಪತ್ರಗಳು, 50 ಹೊಲಿಗೆ ಯಂತ್ರಗಳು, ಕಬ್ಬಿಣ ಸ್ಟಾಂಡ್‌ಗಳು, ಸೀರೆಗಳು, 170 ಲ್ಯಾಪ್‌ಟಾಪ್‌ ವಶಕ್ಕೆ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.