ADVERTISEMENT

ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ : ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2011, 20:15 IST
Last Updated 14 ಆಗಸ್ಟ್ 2011, 20:15 IST
ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ : ಇಬ್ಬರ ಸಾವು
ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ : ಇಬ್ಬರ ಸಾವು   

ಬೆಂಗಳೂರು: ರಥೋತ್ಸವದ ಸಂದರ್ಭದಲ್ಲಿ ರಥವು ಹೈಟೆನ್ಶನ್ ವಿದ್ಯುತ್ ತಂತಿಯೊಂದಕ್ಕೆ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಇಬ್ಬರು ದಾರುಣ ಸಾವಿಗೀಡಾದ ಘಟನೆ ಭಾನುವಾರ ರಾತ್ರಿ 8.45ರ ಸುಮಾರಿಗೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೇಂದ್ರನಗರದಲ್ಲಿ ನಡೆದಿದೆ.

ಆದಿಶಕ್ತಿ ಕರುಮಾರಿಯಮ್ಮ ದೇವಿಯ ರಥೋತ್ಸವದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮುನಿಯಮ್ಮ (55), ಪ್ರತಾಪ್ (19) ಎಂಬುವವರು ಮೃತಪಟ್ಟ ದುರ್ದೈವಿಗಳು. ಪ್ರಿಯಾಂಕಾ, ಜ್ಯೋತಿ, ಮೇರಿ, ಕಲ್ಪನಾ, ಭಾಗ್ಯ, ವಾಸಂತಿ ಮತ್ತು ಸ್ವರ್ಣಲಕ್ಷ್ಮಿ ಎಂಬುವವರು ಗಾಯಗೊಂಡಿದ್ದು, ಅವರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತರಲ್ಲಿ ಮುನಿಯಮ್ಮ ಸ್ಥಳೀಯ ನಿವಾಸಿಯಾದರೆ, ಪ್ರತಾಪ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನವರು. ಕತ್ರಿಗುಪ್ಪೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದ ಇವರು ನಗರದ ಬಾರ್ ಒಂದರ ಉದ್ಯೋಗಿ. ರಥೋತ್ಸವದ ಹಿನ್ನೆಲೆಯಲ್ಲಿ ದೊಡ್ಡಮ್ಮನ ಮನೆ ಇರುವ ರಾಜೇಂದ್ರ ನಗರಕ್ಕೆ ಬಂದು ರಥ ಎಳೆಯಲು ಮುಂದಾಗಿದ್ದ ಸಂದರ್ಭದಲ್ಲೇ ಅವಘಡ ಸಂಭವಿಸಿತು.

ADVERTISEMENT

ಘಟನೆ ವಿವರ: ದೇವಸ್ಥಾನವು ರಾಜೇಂದ್ರನಗರದ 7ನೇ ಮುಖ್ಯರಸ್ತೆಯಲ್ಲಿದ್ದು, ಅಲ್ಲಿಂದ ಅಂದಾಜು 200 ಮೀಟರ್ ದೂರದ ಮೊದಲನೇ ಅಡ್ಡರಸ್ತೆಗೆ ರಥವನ್ನು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಗಳು ರಥದ ಶಿಖರಕ್ಕೆ ತಗುಲಿ ಇಡೀ ರಥಕ್ಕೆ ವಿದ್ಯುತ್ ಪ್ರವಹಿಸಿದೆ. ತಕ್ಷಣ ರಥದ ಅಟ್ಟಣಿಗೆಯ ಮೇಲೆ ಕುಳಿತಿದ್ದ ಇಬ್ಬರು ಜಿಗಿದು ಪಾರಾಗಿದ್ದಾರೆ. ಅಷ್ಟರಲ್ಲೇ ರಥ ಎಳೆಯುತ್ತಿದ್ದವರಿಗೂ ಶಾಕ್ ತಗುಲಿ ಇಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.