ADVERTISEMENT

ರಸ್ತೆಗಳ ಮೇಲ್ದರ್ಜೆಗೆ ರೂ 1,100 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಬೆಂಗಳೂರು: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ ವರ್ಷ ನಗರ ಸ್ಥಳೀಯ ಸಂಸ್ಥೆಗಳ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ) ವ್ಯಾಪ್ತಿಯಲ್ಲಿನ 4,500 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಶುಕ್ರವಾರ ಇಲ್ಲಿ ತಿಳಿಸಿದರು.

ಈ ಯೋಜನೆಯಡಿ ಮೂರು ವರ್ಷದಲ್ಲಿ ಒಟ್ಟು 1,591 ಕೋಟಿ ರೂಪಾಯಿ ವೆಚ್ಚ ಮಾಡಲು ಅವಕಾಶವಿದೆ. ಈ ವರ್ಷ ರಸ್ತೆ, ಒಳಚರಂಡಿಗಾಗಿ 1,100 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಮಹಾನಗರ ಪಾಲಿಕೆಗಳನ್ನು ಹೊರತುಪಡಿಸಿ) ಒಟ್ಟು 15 ಸಾವಿರ ಕಿ.ಮೀ. ರಸ್ತೆ ಇದೆ. ಈ ವರ್ಷ 4,500 ಕಿ.ಮೀ. ರಸ್ತೆಗೆ ಡಾಂಬರು ಹಾಕಿ ಉತ್ತಮ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪ್ರತಿ ಕಿ.ಮೀ.ಗೆ 20 ಲಕ್ಷ ರೂಪಾಯಿ ಪ್ರಕಾರ ಒಟ್ಟು 900 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದರು. ಅಕ್ಟೋಬರ್‌ನಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ, 2013ರ ಜನವರಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಿ, ಜಿಲ್ಲಾ ಮಟ್ಟದಲ್ಲಿ ಪ್ಯಾಕೇಜ್‌ಗಳನ್ನು ಮಾಡಿ ಟೆಂಡರ್ ಕರೆಯಲಾಗುವುದು ಎಂದರು.

ಈ ಯೋಜನೆಯ ಒಟ್ಟು ಅನುದಾನದಲ್ಲಿ ಶೇ 80ರಷ್ಟನ್ನು ರಸ್ತೆಗಳಿಗೆ, ಶೇ 20ರಷ್ಟನ್ನು ಒಳಚರಂಡಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತದೆ. ಒಳಚರಂಡಿ ಕಾಮಗಾರಿಗಳಿಗೆ ಈ ವರ್ಷವೇ 247 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 74 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅಗತ್ಯವಿರುವ ಕಡೆ ಕೊಳವೆಬಾವಿಗಳನ್ನು ಕೊರೆಯಲಾಗುವುದು ಎಂದರು.

ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ಆಲಿಸಲು, ದೂರುಗಳನ್ನು ಸ್ವೀಕರಿಸಲು ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ಒತ್ತುವರಿ: ಮಾಹಿತಿ ನೀಡಲು ಗಡುವು
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಾದ ನಿವೇಶಗಳು, ಉದ್ಯಾನಗಳ ಒತ್ತುವರಿ ಬಗ್ಗೆ ಈ ತಿಂಗಳ ಅಂತ್ಯದ ಒಳಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT