ADVERTISEMENT

ರಸ್ತೆ ಅಗೆದು ಹಾಗೆಯೇ ಬಿಟ್ಟರು...

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಪಾದಚಾರಿ ಮಾರ್ಗ ಇಲ್ಲದ್ದರಿಂದ ಜನರು ಕಷ್ಟಪಟ್ಟು ಸಂಚರಿಸಿದ ದೃಶ್ಯ
ಪಾದಚಾರಿ ಮಾರ್ಗ ಇಲ್ಲದ್ದರಿಂದ ಜನರು ಕಷ್ಟಪಟ್ಟು ಸಂಚರಿಸಿದ ದೃಶ್ಯ   

ಬೆಂಗಳೂರು: ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿ ಸಮೀಪದ ಮುತ್ತುರಾಜ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಾಣಕ್ಕಾಗಿ ಎರಡು ವರ್ಷಗಳಿಂದ ರಸ್ತೆ ಅಗೆದಿರುವುದು ಬಿಟ್ಟರೆ ಹೆಚ್ಚೇನೂ ಕೆಲಸ ಆಗಿಲ್ಲ.

₹17.82 ಕೋಟಿ ವೆಚ್ಚದ ಕಾಮಗಾರಿಯ ಗುತ್ತಿಗೆಯನ್ನು ಎಂ. ವೆಂಕಟರಾವ್‌ ಇನ್ಫ್ರಾ ಸಂಸ್ಥೆಗೆ ವಹಿಸಲಾಗಿತ್ತು. 2015ರ ಸೆಪ್ಟೆಂಬರ್‌ 1ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 18 ತಿಂಗಳಲ್ಲಿ ಕೆಲಸ ಮುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಇದರ ಪ್ರಕಾರ ಮಾರ್ಚ್‌ 1ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅವಧಿ ಮುಗಿದು ಏಳು ತಿಂಗಳಾಗಿದ್ದರೂ ಶೇ 30ರಷ್ಟು ಕೆಲಸವೂ ಪೂರ್ಣಗೊಂಡಿಲ್ಲ.

ಮೈಸೂರು ರಸ್ತೆ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ವರೆಗಿನ ಹೊರ ವರ್ತುಲ ರಸ್ತೆಯನ್ನು ಸಿಗ್ನಲ್‌ ಮುಕ್ತಗೊಳಿಸುವ ಯೋಜನೆಯನ್ನು ನಗರೋತ್ಥಾನ ಅನುದಾನದಡಿ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಮುತ್ತುರಾಜ ಜಂಕ್ಷನ್‌ನಲ್ಲಿ 277 ಮೀಟರ್‌ ಉದ್ದದ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ. ಇದರ ನಂತರ ಫುಡ್‌ವರ್ಲ್ಡ್‌ ಜಂಕ್ಷನ್‌, ಜೇಡಿಮರ ಜಂಕ್ಷನ್‌ಗಳಲ್ಲಿ ಕೆಳಸೇತುವೆ ನಿರ್ಮಾಣ ಕೈಗೆತ್ತಿಕೊಳ್ಳಲು ಬಿಬಿಎಂಪಿ ಉದ್ದೇಶಿಸಿದೆ.

ADVERTISEMENT

ಸಂಚಾರ ದಟ್ಟಣೆ: 2ಮೈಸೂರು ರಸ್ತೆಯಿಂದ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸರಕು ಸಾಗಣೆಯ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಸಂಚಾರ ಪೊಲೀಸರ ಪ್ರಕಾರ, ಸಂಜೆ ವೇಳೆಗೆ ಈ ಮಾರ್ಗದಲ್ಲಿ ದಟ್ಟಣೆ ವಿಪರೀತವಾಗಿರುತ್ತದೆ. ಗಂಟೆಗೆ ಸುಮಾರು ಐದಾರು ಸಾವಿರ ವಾಹನಗಳು ಇಲ್ಲಿ ಸಂಚರಿಸುತ್ತವೆ.

‘ಒಮ್ಮೆಗೇ ಮೂರು ವಾಹನಗಳು ಹೋಗುತ್ತಿದ್ದ ರಸ್ತೆಯಲ್ಲಿ ಈಗ ಒಂದು ವಾಹನವಷ್ಟೇ ಹೋಗಬಹುದು. ಸಂಜೆ ವೇಳೆಗೆ ಯಾವುದಾದರೂ ಲಾರಿ ಕೆಟ್ಟು ನಿಂತರೆ 3 ಕಿ.ಮೀವರೆಗೂ ಸಂಚಾರ ದಟ್ಟಣೆ ಉಂಟಾಗುತ್ತದೆ. ಅದನ್ನು ನಿರ್ವಹಣೆ ಮಾಡುವುದೇ ಕಷ್ಟ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ’ ಎಂದು ಸಂಚಾರ ಪೊಲೀಸ್‌ ಅನಿಲ್‌ ತಿಳಿಸಿದರು.

‘ಬಿಬಿಎಂಪಿ ಕೈಗೊಂಡ ಯಾವ ಯೋಜನೆಗಳೂ ಕಾಲಮಿತಿಯಲ್ಲಿ ಮುಗಿಯುವುದಿಲ್ಲ. ಕೆ.ಇ.ಬಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಎರಡು ತಿಂಗಳು ತಡವಾಗಿ ಪೂರ್ಣಗೊಂಡಿತು. ಆದರೆ, ಈ ಕೆಳಸೇತುವೆ ನಿರ್ಮಾಣಕ್ಕೆಂದು ರಸ್ತೆ ಅಗೆದು ವರ್ಷಗಳೇ ಕಳೆದಿವೆ. ಎಲ್ಲದಕ್ಕೂ ಅನುಮತಿ ದೊರೆತ ನಂತರ ರಸ್ತೆ ಅಗೆಯಬೇಕಲ್ಲವೇ’ ಎಂದು ಸ್ಥಳೀಯ ನಿವಾಸಿ ರಾಮಚಂದ್ರಯ್ಯ ಪ್ರಶ್ನಿಸಿದರು.

ಭೂಸ್ವಾಧೀನ ಪ್ರಕ್ರಿಯೆ: ಒಂದು ವರ್ಷದ ಹಿಂದೆಯೇ ಮರಗಳನ್ನು ಕಡಿಯಲಾಗಿದೆ. ಕೆಳಸೇತುವೆ ನಿರ್ಮಾಣಕ್ಕೆ ಅನುವು ಮಾಡಿಕೊಡಲು ನೀರು ಸರಬರಾಜು ಮಾರ್ಗಗಳನ್ನು ಮೇಲ್ದರ್ಜೆಗೇರಿಸಬೇಕಿದೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ.

‘ನೀರು ಸರಬರಾಜು ಮಾರ್ಗಗಳನ್ನು ಸ್ಥಳಾಂತರಿಸುವ ಬದಲು ಅವುಗಳನ್ನು 300 ಎಂ.ಎಂ.ನಿಂದ 600 ಎಂ.ಎಂ.ಗೆ ಏರಿಸಬೇಕೆಂದು ಜಲಮಂಡಳಿ ಕೋರಿತ್ತು. ಅದಕ್ಕಾಗಿ ಹೊಸದಾಗಿ ಅನುಮತಿ ಪಡೆಯಬೇಕಿತ್ತು. ಇದರಿಂದ ಕಾಮಗಾರಿ ವಿಳಂಬವಾಯಿತು. ಕಳೆದ ತಿಂಗಳಿನಿಂದ ಕೆಲಸ ಪ್ರಾರಂಭವಾಗಿದೆ. ಇದಕ್ಕಾಗಿ ಜಲಮಂಡಳಿ ಶೇ 10ರಷ್ಟು ಮೊತ್ತವನ್ನು ಬಿಬಿಎಂಪಿಗೆ ಭರಿಸಲಿದೆ’ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ ಕೆ.ಟಿ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ 8 ಮೀಟರ್‌ ಜಾಗ ಅಗತ್ಯವಿದೆ. ಸದ್ಯ ಪಾಲಿಕೆಗೆ ಸೇರಿದ 6.5 ಮೀಟರ್‌ ಜಾಗ ಮಾತ್ರ ಇದೆ. ಹಾಗಾಗಿ ಭೂಸ್ವಾಧೀನದ ಅಗತ್ಯವಿದೆ. ಇದಕ್ಕಾಗಿ 34 ಆಸ್ತಿ ಮಾಲೀಕರೊಂದಿಗೆ ಮಾತನಾಡಿದ್ದೇವೆ. ಅವರೊಂದಿಗೆ ಸಭೆ ನಡೆಸಿದ್ದು, ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಮಾರ್ಚ್‌ಗೆ ಕೆಳಸೇತುವೆ ಕೆಲಸ ಪೂರ್ಣ: ‘ನೀರು ಸರಬರಾಜು ಮಾರ್ಗದ ಕೆಲಸ ಪೂರ್ಣಗೊಂಡರೆ ಇನ್ನೆಲ್ಲ ಕೆಲಸ ಶೀಘ್ರವಾಗಿ ಮುಗಿಯಲಿದೆ. ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ’ ಎಂದು ಪಾಲಿಕೆಯ ಕಾರ್ಯ­ನಿರ್ವಾಹಕ ಎಂಜಿನಿಯರ್‌ ನರಸಿಂಹ ಶಾಸ್ತ್ರಿ ತಿಳಿಸಿದರು.

ಕಾಮಗಾರಿ ವಿಳಂಬ; ಜನರಲ್ಲಿ ಬೇಸರ
ಕೆಳಸೇತುವೆ ನಿರ್ಮಾಣಕ್ಕಾಗಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಅಗೆದಿದ್ದಾರೆ. ಇದರಿಂದ ನಡೆದು ಹೋಗುವುದೇ ಸಾಹಸದ ಕೆಲಸ. ಎಲ್ಲಿ ಬೀಳುತ್ತೇವೆಯೋ ಎನ್ನುವ ಭಯ ಕಾಡುತ್ತಿದೆ.
– ಲಕ್ಷ್ಮಣ್‌, ಪಾದಚಾರಿ

*
72 ವರ್ಷ ವಯಸ್ಸಾಗಿದೆ. ರಸ್ತೆ ಅಗೆದಿರುವ ಕಡೆಯಲ್ಲಿ ಗುಂಡಿಗಳನ್ನು ದಾಟಿಕೊಂಡು ಹೋಗಬೇಕು. ವಾಹನಗಳ ಸಂಚಾರಕ್ಕೆ ಒಂದು ರೀತಿಯಲ್ಲಿ ತೊಂದರೆ ಆಗುತ್ತಿದ್ದರೆ, ಪಾದಚಾರಿಗಳಿಗೆ ಮತ್ತೊಂದು ರೀತಿ ತೊಂದರೆ ಆಗುತ್ತಿದೆ.
–ವೆಂಕಟಾದ್ರಿ, ಸ್ಥಳೀಯ

*
ಕೆಳಸೇತುವೆಗಾಗಿ ಒಂದು ವರ್ಷದ ಮೊದಲೇ ಮರಗಳನ್ನು ಕಡಿದಿದ್ದಾರೆ. ಆದರೆ, ಕಾಮಗಾರಿ ಇನ್ನೂ ಶುರುವಾಗಿಲ್ಲ. ಸಾಕಷ್ಟು ನೆರಳು ಸಿಗುತ್ತಿದ್ದ ಜಾಗದಲ್ಲಿ ಬಿಸಿಲಿನ ಝಳ ತೀವ್ರವಾಗಿದೆ.
–ಚನ್ನಯ್ಯ, ಲೈಫ್‌ ಕೇರ್‌ ಡಯಾಲಿಸಿಸ್‌ ಕೇಂದ್ರ

*
ಕಾಮಗಾರಿ ಪ್ರಾರಂಭವಾಗದ ಕಾರಣ ರಸ್ತೆಗಳನ್ನು ಅಗೆದಿರುವ ಜಾಗದಲ್ಲಿ ಜನರು ಕಟ್ಟಡ ತ್ಯಾಜ್ಯ, ಕಸ ತಂದು ಸುರಿಯುತ್ತಿದ್ದಾರೆ. ಮಳೆ ಬಂದಾಗ ಈ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಮಸ್ಯೆಯೂ ಹೆಚ್ಚಾಗಿದೆ.
–ಸವಿತಾ, ಸ್ಥಳೀಯ ನಿವಾಸಿ

*
ರಸ್ತೆ ಚಿಕ್ಕದಾಗಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಸಂಜೆ ವೇಳೆ ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಜತೆಗೆ ಕಿವಿಗೆ ಅಪ್ಪಳಿಸುವ ಹಾಗೆ ಹಾರನ್‌ ಹಾಕುತ್ತಾರೆ. ಈ ಕಿರಿಕಿರಿಯಲ್ಲಿ ನೆಮ್ಮದಿ ಕಳೆದುಕೊಂಡಿದ್ದೇವೆ. 30 ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ರಸ್ತೆ ಅಗಲವಿದ್ದಾಗ ಈ ಸಮಸ್ಯೆ ಇರಲಿಲ್ಲ.
–ಮಂಗಳಾ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.