ADVERTISEMENT

ರಸ್ತೆ ಗುಂಡಿಗಿಳಿದ ಮತ್ಸ್ಯಕನ್ಯೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 20:36 IST
Last Updated 13 ಅಕ್ಟೋಬರ್ 2017, 20:36 IST
ರಸ್ತೆ ಗುಂಡಿಗಿಳಿದ ಮತ್ಸ್ಯಕನ್ಯೆ
ರಸ್ತೆ ಗುಂಡಿಗಿಳಿದ ಮತ್ಸ್ಯಕನ್ಯೆ   

ಬೆಂಗಳೂರು: ಜೀವ ತೆಗೆಯುವ ರಸ್ತೆ ಗುಂಡಿಗಳಿಂದ ಬೇಸತ್ತಿದ್ದ ವಾಹನ ಸವಾರರಿಗೆ ಶುಕ್ರವಾರ ಬೆಳಿಗ್ಗೆ ಅಚ್ಚರಿ ಕಂಡಿತ್ತು. ಸಮುದ್ರದಂತೆ ಭಾಸವಾಗುತ್ತಿದ್ದ ಗುಂಡಿ, ಅದರಿಂದ ಮೇಲೆದ್ದ ಮತ್ಸ್ಯಕನ್ಯೆಯೊಬ್ಬಳು ಒಳಚರಂಡಿಯ ಮುಚ್ಚಳದ ಮೇಲೆ ಕುಳಿತು ಸವಾರರ ಕಡೆಗೆ ಮುಗುಳುನಗೆ ಬೀರುತ್ತಿದ್ದಳು! ಈ ದೃಶ್ಯವನ್ನು ಕಂಡ ಸವಾರರಿಗೆ ಇದು ಗುಂಡಿಯೋ, ಸಮುದ್ರವೋ ಎಂಬ ಅನುಮಾನ ಅರೆಗಳಿಗೆ ಕಾಡಿತು.

ನಗರದ ಎಂ.ಜಿ. ರಸ್ತೆ ಸಮೀಪದ ಕಾಮರಾಜ ರಸ್ತೆಯಲ್ಲಿ ಕಂಡುಬಂದ ದೃಶ್ಯ ವಿದು. ರಸ್ತೆ ಗುಂಡಿಗಳ ಬಗ್ಗೆ ಚಿತ್ರಕಲಾವಿದ ಬಾದಲ್‌ ನಂಜುಂಡಸ್ವಾಮಿ ಪ್ರತಿಷ್ಠಾಪನಾ ಕಲೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ ಪರಿ ಇದು. ನಟಿ ಸೋನು ಗೌಡ ಮತ್ಸ್ಯಕನ್ಯೆಯಾಗಿ ಗುಂಡಿಗಳ ದುಃಸ್ಥಿತಿಯನ್ನು ಎತ್ತಿತೋರಿಸಿದರು.

ರಸ್ತೆ ಗುಂಡಿಯಲ್ಲಿದ್ದ ನೀರಿಗೆ ನೀಲಿ ಬಣ್ಣ ಬೆರೆಸಿ ಸಮುದ್ರದ ರೂಪ ನೀಡಿದ ಬಾದಲ್‌, ಹಸಿರು ಬಣ್ಣದ ಮತ್ಸ್ಯಕನ್ಯೆಯ ವೇಷ ಧರಿಸಿದ್ದ ಸೋನು ಗೌಡ ಅವರನ್ನು ಕೂರಿಸಿದರು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕ್ಷಣ ಹೊತ್ತು ನಿಂತು ನೋಡಿಕೊಂಡು ಹೋಗುತ್ತಿದ್ದರು.

ADVERTISEMENT

‘ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಪ್ರಾಣಹಾನಿ ಉಂಟಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಗುಂಡಿ
ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಮುಂದೆ ಸಂಭವಿಸುವ ಅನಾಹುತಗಳನ್ನು ತಡೆಗಟ್ಟಬೇಕು’ ಎಂದು ಬಾದಲ್‌ ಒತ್ತಾಯಿಸಿದರು.

ಸೋನು ಗೌಡ, ‘ರಸ್ತೆ ಗುಂಡಿಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಮತ್ಸ್ಯಕನ್ಯೆಯ ವೇಷ ಧರಿಸಿದ್ದೇನೆ. ಗುಂಡಿ
ಗಳಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಸಂಚಾರ ದಟ್ಟಣೆಗೂ ಗುಂಡಿಗಳು ಕಾರಣವಾಗಿವೆ’ ಎಂದರು.

ರಸ್ತೆ ಗುಂಡಿಯನ್ನು ಕಲಾಕೃತಿಯಾಗಿಸುವ ಮುನ್ನಾ ತೆಗೆದ ಫೋಟೊ ಮತ್ತು ನಂತರ ತೆಗೆದ ಫೋಟೊಗಳನ್ನು ಬಾದಲ್‌ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರಕ್ಕೆ 4 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಒತ್ತಿದ್ದಾರೆ. ಅಲ್ಲದೆ, ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಹಲವರು ಕಮೆಂಟ್‌ಗಳಲ್ಲಿ ಕಿಡಿಕಾರಿದ್ದಾರೆ.

ಗುಂಡಿ ಮುಚ್ಚುವ ಕಾರ್ಯ ಮುಂದುವರಿಕೆ: ಬಿಬಿಎಂಪಿ ವತಿಯಿಂದ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮುಂದುವರಿದಿದೆ.

ಹೆಣ್ಣೂರು–ಬಾಗಲೂರು ರಸ್ತೆಯ ಹಿರೇಮಠ ಬಡಾವಣೆ, ದೇವಸಂದ್ರ ಮುಖ್ಯರಸ್ತೆ, ಪೀಣ್ಯ ಮೂರನೇ ಹಂತದ ವರ್ತುಲ ರಸ್ತೆ, ಭಾರತೀಯ ವಿಜ್ಞಾನ ಸಂಸ್ಥೆಯ ಬಳಿ, ಹಂಪಿನಗರ 5ನೇ ಮುಖ್ಯರಸ್ತೆ, ಕಗ್ಗದಾಸಪುರ ಮುಖ್ಯರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ, ಕೆಂಚೇನಹಳ್ಳಿ ಮುಖ್ಯರಸ್ತೆ, ತುಮಕೂರು ಮುಖ್ಯರಸ್ತೆ ಮತ್ತು ಯಲಹಂಕ ಸಮೀಪದಲ್ಲಿರುವ ಯಶೋದಾ ನಗರ ಸೇರಿ ವಿವಿಧೆಡೆ ರಸ್ತೆ ಗುಂಡಿಗಳನ್ನು ಮುಚ್ಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.