ADVERTISEMENT

ರಸ್ತೆ ಗುಣಮಟ್ಟಕ್ಕೆ ಸ್ವಾಯತ್ತ ಘಟಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:58 IST
Last Updated 24 ಜೂನ್ 2013, 19:58 IST

ಬೆಂಗಳೂರು: ರಸ್ತೆ ಗುಣಮಟ್ಟದ ಮೇಲೆ ನಿಗಾ ಇಡುವ ಜಾಗೃತ ದಳಕ್ಕೆ `ಸ್ವಾಯತ್ತ' ಸ್ಥಾನಮಾನ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್. ಸಿ.ಮಹದೇವಪ್ಪ ಸೋಮವಾರ ಹೇಳಿದರು.

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಇದರ ಉಸ್ತುವಾರಿಯ ಜಾಗೃತ ದಳಕ್ಕೆ ಸ್ವಾಯತ್ತ ಸ್ಥಾನಮಾನ ನೀಡಲಾಗುವುದು. ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿದ ಗುತ್ತಿಗೆದಾರರು ಮತ್ತು ಉಸ್ತುವಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಈ ದಳಕ್ಕೆ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ರಸ್ತೆ ತಪಾಸಣಾ ವ್ಯವಸ್ಥೆಯನ್ನು ಜಾರಿ ಮಾಡುವ ಉದ್ದೇಶ ಇದೆ. ಯಾವ ರಸ್ತೆಗೆ ಎಷ್ಟು ಪ್ರಮಾಣದ ಅನುದಾನ ಬಳಸಲಾಗಿದೆ? ಎಷ್ಟು ದಿನದ ನಂತರ ಅದು ದುರಸ್ತಿಗೆ ಬಂದಿದೆ? ಏಕೆ ಬಂತು? ಇತ್ಯಾದಿ ಎಲ್ಲ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗುವ ಹಾಗೆ ಮಾಡುತ್ತೇವೆ. ಈ ವ್ಯವಸ್ಥೆ ಜಾರಿ ನಂತರ ದುರಸ್ತಿ ಮಾಡಿದ ರಸ್ತೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸುವುದಕ್ಕೆ ಅವಕಾಶ ಇರುವುದಿಲ್ಲ. ಪದೇ ಪದೇ ಒಂದೇ ರಸ್ತೆ ಅಭಿವೃದ್ಧಿಗೂ ಕಡಿವಾಣ ಬೀಳಲಿದೆ' ಎಂದು ಅವರು ವಿವರಿಸಿದರು.

ಆರು ಪಥದ ರಸ್ತೆ: ಬೆಂಗಳೂರು- ಮೈಸೂರು ಹೆದ್ದಾರಿಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ವಾಹನ ದಟ್ಟಣೆ ಜಾಸ್ತಿಯಾಗಿರುವ ಕಾರಣ ರಸ್ತೆ ಅಗಲ ಮಾಡುವುದು ಅನಿವಾರ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.