ADVERTISEMENT

ರಸ್ತೆ ದಾಟುವಾಗ ಸಂಭವಿಸಿದ ದುರ್ಘಟನೆ:ದಂಪತಿಗೆ ಕಾರು ಡಿಕ್ಕಿ: ಮಗು ಸಾವು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೆಂಗಳೂರು: ಮಗುವನ್ನು ಎತ್ತಿಕೊಂಡು ರಸ್ತೆ ದಾಟುತ್ತಿದ್ದ ದಂಪತಿಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೆ.ಆರ್.ಪುರ ವರ್ತುಲ ರಸ್ತೆಯ ಹೊರಮಾವು ಜಂಕ್ಷನ್ ಸಮೀಪ ಸೋಮವಾರ ರಾತ್ರಿ ನಡೆದಿದೆ.

ಬಂಗಾರಪೇಟೆ ತಾಲ್ಲೂಕಿನ ರಾಮಚಂದ್ರಪ್ಪ ಮತ್ತು ಶೈಲಜಾ ದಂಪತಿಯ ಲಕ್ಷ್ಮಿ ಎಂಬ ಐದು ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಶೈಲಜಾ ಅವರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷಿಕರಾದ ರಾಮಚಂದ್ರಪ್ಪ ಅವರ ಸಂಬಂಧಿಕರು ಹೊರಮಾವು ಬಳಿ ನೆಲೆಸಿದ್ದಾರೆ. ಬಂಗಾರಪೇಟೆಯಿಂದ ರಾತ್ರಿ ಎಂಟು ಗಂಟೆ ಸುಮಾರಿಗೆ ನಗರಕ್ಕೆ ಬಂದ ರಾಮಚಂದ್ರಪ್ಪ ದಂಪತಿ ಮಗುವಿನ ಜತೆ ಆ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ದಂಪತಿ ಹೊರಮಾವು ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆಯಿತು.

ಘಟನೆಯಲ್ಲಿ ಮಗುವಿನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಂತರ ಕಾರು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ

ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಸಮೀಪದ ಚಿಕ್ಕಸಂದ್ರದಲ್ಲಿ ಸೋಮವಾರ ರಾತ್ರಿ ನಡೆದಿದೆ.ಚಿಕ್ಕಸಂದ್ರ ಮೂರನೇ ಅಡ್ಡರಸ್ತೆ ನಿವಾಸಿ ಮಂಜುನಾಥ್ ಎಂಬುವರ ಪತ್ನಿ ಉಮಾದೇವಿ (25) ಆತ್ಮಹತ್ಯೆ ಮಾಡಿಕೊಂಡವರು. ಅವರ ಮದುವೆಯಾಗಿ ಐದು ವರ್ಷವಾಗಿತ್ತು ಮತ್ತು ಅವರಿಗೆ ಮೂರು ವರ್ಷದ ಗಂಡು ಮಗುವಿದೆ.

ಉಮಾದೇವಿ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಮಂಜುನಾಥ್ ಕೇಬಲ್ ಹಾಕುವ ಕೆಲಸ ಮಾಡುತ್ತಾರೆ. ಪತಿ ಮಗುವಿನ ಜತೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಉಮಾದೇವಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಸೋಲದೇವನಹಳ್ಳಿ ಪೊಲೀಸರು ಹೇಳಿದ್ದಾರೆ.

`ಅಳಿಯ, ಮಗಳಿಗೆ ಕಿರುಕುಳ ನೀಡುತ್ತಿದ್ದ. ಆತನೇ ಮಗಳನ್ನು ಕೊಲೆ ಮಾಡಿರುವ ಶಂಕೆ ಇದೆ~ ಎಂದು ಉಮಾದೇವಿ ತಾಯಿ ನಂಜಮ್ಮ ಅವರು ದೂರು ಕೊಟ್ಟಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಮಂಜುನಾಥ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧನ

 ಸಾಲಗಾರರಿಂದ ಕಾನೂನುಬಾಹಿರವಾಗಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರ್.ಟಿ.ನಗರ ಬಳಿಯ ಕೌಸರ್‌ನಗರದ ಮೊಯಿನುದ್ದಿನ್ (43) ಎಂಬುವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 51 ಸಾವಿರ ನಗದು, ಸಾಲಗಾರರು ಸಹಿ ಹಾಕಿಕೊಟ್ಟಿದ್ದ ವಿವಿಧ ಬ್ಯಾಂಕ್‌ಗಳ 103 ಚೆಕ್‌ಗಳು ಮತ್ತಿತರ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಬಡ ಜನರಿಗೆ ಸಾಲ ನೀಡುತ್ತಿದ್ದ ಮೊಯಿನುದ್ದಿನ್ ತಿಂಗಳಿಗೆ ಶೇ 15ರಿಂದ 20ರಷ್ಟು ಬಡ್ಡಿ ಪಡೆಯುತ್ತಿದ್ದ. ಬಡ್ಡಿ ಹಣ ನೀಡದ ಸಾಲಗಾರರಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕಿಸುತ್ತಿದ್ದ.
ಆತ ವಾರ್ಷಿಕ ಒಂದು ಕೋಟಿ ರೂಪಾಯಿಗೂ ಹೆಚ್ಚು ಬಡ್ಡಿ ವ್ಯವಹಾರ ಮಾಡುತ್ತಿದ್ದ. ಆತನ ವಿರುದ್ಧ ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳವು

ಮನೆ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ವಜ್ರದ ಡಾಲರ್ ಮತ್ತು ಎರಡು ಚಿನ್ನದ ಸರಗಳನ್ನು ಕಳವು ಮಾಡಿರುವ ಘಟನೆ ಸಿ.ವಿ.ರಾಮನ್‌ನಗರ ಸಮೀಪದ ಭುವನೇಶ್ವರಿನಗರದಲ್ಲಿ ನಡೆದಿದೆ.
ಭುವನೇಶ್ವರಿನಗರ ಮೂರನೇ ಮುಖ್ಯರಸ್ತೆ ನಿವಾಸಿ ಪ್ರಿಯಾ ಜಂಬೂನಾಥನ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ.

ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಶನಿವಾರ (ಮಾ.31) ಚೆನ್ನೈಗೆ ಹೋಗಿದ್ದರು.

ಈ ವೇಳೆ ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಅಲ್ಮೇರಾದಲ್ಲಿದ್ದ ಡಾಲರ್ ಮತ್ತು ಸರಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಕಳವಾಗಿರುವ ವಸ್ತುಗಳ ಮೌಲ್ಯದ ಬಗ್ಗೆ ಅವರು ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.