ADVERTISEMENT

ರಸ್ತೆ ದುರಸ್ತಿಗಾಗಿ ಪ್ರತಿಭಟನೆ ನಾಳೆ

ವೈಟ್‌ಫೀಲ್ಡ್‌ನಲ್ಲಿನ ರಾಮಗೊಂಡನಹಳ್ಳಿ ಮತ್ತು ಬೋರ್‌ವೆಲ್‌ ರಸ್ತೆಗೆ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:14 IST
Last Updated 27 ಅಕ್ಟೋಬರ್ 2017, 20:14 IST
ಕೆರೆಯಂತಾಗಿರುವ ರಸ್ತೆಯಲ್ಲಿ ಹರಸಾಹಸಪಟ್ಟು ವಾಹನ ಚಲಾಯಿಸುತ್ತಿರುವ ಸವಾರರು
ಕೆರೆಯಂತಾಗಿರುವ ರಸ್ತೆಯಲ್ಲಿ ಹರಸಾಹಸಪಟ್ಟು ವಾಹನ ಚಲಾಯಿಸುತ್ತಿರುವ ಸವಾರರು   

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿನ ರಾಮಗೊಂಡನಹಳ್ಳಿ ಮತ್ತು ಬೋರ್‌ವೆಲ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಎರಡು ವರ್ಷದಿಂದ ಹಾಳಾಗಿದೆ.

ರಸ್ತೆ ದುರಸ್ತಿಗೊಳಿಸುವಂತೆ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ರಸ್ತೆ ದುರಸ್ತಿಗಾಗಿ ಇಲ್ಲಿನ ನಿವಾಸಿಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

‘1.2 ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಪ್ರತಿದಿನ ಸುಮಾರು 500 ಮಂದಿ ಸಂಚರಿಸುತ್ತಾರೆ. ಈ ಭಾಗದಲ್ಲಿ ಸುಮಾರು 2500 ಮಂದಿ ವಾಸಿಸುತ್ತಿದ್ದು, ಸಾಕಷ್ಟು ಮಂದಿ ಹಿರಿಯ ನಾಗರಿಕರಿದ್ದಾರೆ. ಕೆಸರುಗದ್ದೆಯಂತಾಗಿರುವ ಈ ರಸ್ತೆಯಲ್ಲಿ ನಡೆಯಲಾಗದೆ ಅನೇಕರು ಬಿದ್ದಿದ್ದಾರೆ’ ಎಂದು ಸ್ಥಳೀಯ ನಿವಾಸಿ ಕೋಶಿ ಹೇಳಿದರು.

ADVERTISEMENT

‘ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಎರಡು ವರ್ಷಗಳ ಹಿಂದೆ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದಾದ ಕೆಲವೇ ದಿನಗಳಲ್ಲಿ ಜಲಮಂಡಳಿ ಸಿಬ್ಬಂದಿ ರಸ್ತೆಯನ್ನು ಅಗೆದು, ಹಾಳುಮಾಡಿದರು. ರಸ್ತೆ ದುರಸ್ತಿಗೊಳಿಸುವಂತೆ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ದೂರು ನೀಡಿದಾಗ ಬಂದು ಮಣ್ಣು, ಕಲ್ಲು ತಂದು ಸುರಿದು ಹೋಗುತ್ತಾರೆ’ ಎಂದು ವಿವರಿಸಿದರು.

ಮಾನವ ಸರ‍ಪಳಿ ರಚನೆ: ‘ರಸ್ತೆ ದುರಸ್ತಿಗಾಗಿ ಇದೇ ಭಾನುವಾರ (ಅ.29) ಹಾಳಾಗಿರುವ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸುತ್ತೇವೆ. ಬೆಳಿಗ್ಗೆ 9ರಿಂದ 11 ವರೆಗೂ ಪ್ರತಿಭಟನೆ ನಡೆಯಲಿದ್ದು, 500ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.’

‘ಇದಕ್ಕೂ ಯಾವುದೇ ಪ್ರಯೋಜನವಾಗಲಿಲ್ಲ ಎಂದರೆ ಪ್ರತಿ ಭಾನುವಾರ ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ. ಅದಕ್ಕೂ ಅಧಿಕಾರಿಗಳು ಜಗ್ಗಲಿಲ್ಲ ಎಂದಾದರೆ ಬೃಹತ್‌ ರ‍್ಯಾಲಿ ಹಮ್ಮಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.