ADVERTISEMENT

ರಸ್ತೆ ನಿರ್ವಹಣೆಗೆ ದಿವ್ಯ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಬೆಂಗಳೂರು: ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮಟ್ಟದ ರಸ್ತೆಗಳ ನಿರ್ವಹಣೆಗೆ ಅಗತ್ಯವಿರುವ ಹಣದಲ್ಲಿ ಶೇಕಡ 20ರಿಂದ 30 ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ಖರ್ಚು ಮಾಡುತ್ತಿದೆ. 2011-12ನೇ ಸಾಲಿನಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮಟ್ಟದ ರಸ್ತೆಗಳ ನಿರ್ವಹಣೆಗೆ ಬೇಕಿದ್ದ ಮೊತ್ತ 768 ಕೋಟಿ ರೂಪಾಯಿ. ಆದರೆ ಸರ್ಕಾರ ಖರ್ಚು ಮಾಡಿದ್ದು ಕೇವಲ 192 ಕೋಟಿ ರೂಪಾಯಿ!


ರಾಜ್ಯದ ರಸ್ತೆಗಳ ದುರವಸ್ಥೆ ಕುರಿತು ಕಾಮಗಾರಿಗಳಲ್ಲಿ ಗುಣಮಟ್ಟ ಖಾತ್ರಿ ಕಾರ್ಯಪಡೆ ನೀಡಿರುವ ವರದಿಯಲ್ಲಿ ಈ ಕುರಿತು ಅಂಕಿಸಂಖ್ಯೆಗಳನ್ನು ನೀಡಲಾಗಿದೆ. 2010-11ನೇ ಸಾಲಿನಲ್ಲಿ ರಾಜ್ಯದ ರಸ್ತೆಗಳ ದುರಸ್ತಿಗೆ 687 ಕೋಟಿ ರೂಪಾಯಿ ಬೇಕಿತ್ತು, ಆದರೆ ಖರ್ಚು ಮಾಡಿದ್ದು 154 ಕೋಟಿ ರೂಪಾಯಿ ಮಾತ್ರ. ಅದೇ ರೀತಿ 2009-10ನೇ ಸಾಲಿನಲ್ಲಿ 674 ಕೋಟಿ ರೂಪಾಯಿ ಅಗತ್ಯವಿತ್ತು. ವೆಚ್ಚವಾಗಿದ್ದು 312 ಕೋಟಿ ರೂಪಾಯಿ ಮಾತ್ರ ಎಂದು ವರದಿ ಬಹಿರಂಗಪಡಿಸಿದೆ.

ರಾಜ್ಯದಲ್ಲಿ 20,528 ಕಿ.ಮೀ ರಾಜ್ಯ ಹೆದ್ದಾರಿ ಮತ್ತು 50,436 ಕಿ.ಮೀ.ನಷ್ಟು ಜಿಲ್ಲಾ ಮುಖ್ಯ ರಸ್ತೆಗಳಿವೆ. `ಡಾಂಬರು ರಸ್ತೆಯ ನಿರ್ವಹಣೆ ಕಾಮಗಾರಿಯನ್ನು ಕಾಲಕಾಲಕ್ಕೆ ಕೈಗೆತ್ತಿಕೊಳ್ಳಬೇಕು. ಈ ಕಾರ್ಯ ಸರಿಯಾಗಿ ಆಗದಿದ್ದರೆ ರಸ್ತೆಗಳ ಸ್ಥಿತಿ ಹದಗೆಡುತ್ತದೆ. ರಿಪೇರಿ ಖರ್ಚೂ ಹೆಚ್ಚಾಗುತ್ತದೆ. ಒಟ್ಟು ಅಗತ್ಯದ ಶೇಕಡ 20ರಿಂದ 30ರಷ್ಟು ಹಣವನ್ನು ಮಾತ್ರ ರಸ್ತೆ ನಿರ್ವಹಣೆಗೆ ಸರ್ಕಾರ ಖರ್ಚು ಮಾಡುತ್ತಿದೆ~ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.


ಮೂರನೆಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆಯ ಮನವಿ ಮೇರೆಗೆ ಈ ವರದಿ ಸಿದ್ಧಪಡಿಸಲಾಗಿದೆ. `ರಸ್ತೆ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲು ಈಗ ಅನುಸರಿಸುತ್ತಿರುವ ನಿಯಮಾವಳಿಗಳು ವೈಜ್ಞಾನಿಕವಾಗಿಲ್ಲ. ಅನುದಾನವನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಂತಿಷ್ಟು ಎಂದು ತೀರ್ಮಾನಿಸುವ ಬದಲು, ಅಗತ್ಯ ಎಲ್ಲಿದೆ ಎಂಬುದನ್ನು ಪರಿಶೀಲಿಸಿ ಬಿಡುಗಡೆ ಮಾಡಬೇಕು~ ಎಂದು ವರದಿ ಸಲಹೆ ನೀಡಿದೆ.

ಅನುದಾನದ ಕೊರತೆಯ ಕಾರಣ ರಸ್ತೆ ಬದಿಯ ಚರಂಡಿಗಳ ನಿರ್ವಹಣೆ ನೆನೆಗುದಿಗೆ ಬಿದ್ದಿದೆ. ಮಳೆಗಾಲದಲ್ಲಿ ರಸ್ತೆಗಳು ಹಾಳಾಗಲು ಪ್ರಮುಖ ಕಾರಣಗಳಲ್ಲಿ ಇದೂ ಒಂದು. ರಸ್ತೆಗಳು ಸುಸ್ಥಿತಿಯಲ್ಲಿರಲು, ಬದಿಯಲ್ಲಿರುವ ಚರಂಡಿಗಳ ನಿರ್ವಹಣೆ ಸರಿಯಾಗಿರಬೇಕು ಎಂದು ವರದಿ ಹೇಳಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಕೆಲವು ಜಿಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಅವೈಜ್ಞಾನಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಹಣಕಾಸಿನ ಕೊರತೆಯ ಕಾರಣ ಹಲವೆಡೆ ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಆರಂಭಿಸಲೂ ಆಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಡಾಂಬರು ರಸ್ತೆಗೆ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಹೊಸದಾಗಿ ಡಾಂಬರು ಹಾಕಬೇಕು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಡಾಂಬರ್ ಬೆಲೆ ತೀವ್ರಗತಿಯಲ್ಲಿ ಏರಿಕೆ ಕಂಡಿರುವ ಕಾರಣ, ಮರು ಡಾಂಬರೀಕರಣ ಹಿನ್ನಡೆ ಕಂಡಿದೆ. ಆದ್ದರಿಂದ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ರಸ್ತೆ ಬಳಕೆಯ ಪ್ರಮಾಣ ಎಷ್ಟು ಎಂಬುದನ್ನು ಅಂದಾಜಿಸಿ, ಅದರ ವಿನ್ಯಾಸ ನಿರ್ಧರಿಸಬೇಕು. ರೈಲ್ವೆ ಕ್ರಾಸಿಂಗ್ ಬಳಿ ಕಡ್ಡಾಯವಾಗಿ ದ್ವಿಪಥ ರಸ್ತೆ ನಿರ್ಮಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.