ADVERTISEMENT

‘ರಾಜಕಾಲುವೆಗೆ ಇನ್ನೆಷ್ಟು ಬಲಿ ಬೇಕು’

‘ಹೂಳು ತೆಗೆದಿದ್ದರೆ ಆರು ಜೀವಗಳು ಉಳಿಯುತ್ತಿದ್ದವು’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:37 IST
Last Updated 15 ಅಕ್ಟೋಬರ್ 2017, 19:37 IST
‘ರಾಜಕಾಲುವೆಗೆ ಇನ್ನೆಷ್ಟು ಬಲಿ ಬೇಕು’
‘ರಾಜಕಾಲುವೆಗೆ ಇನ್ನೆಷ್ಟು ಬಲಿ ಬೇಕು’   

ಬೆಂಗಳೂರು: ‘ಕುರುಬರಹಳ್ಳಿ ಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆಯಲ್ಲಿ ಹೂಳು ತೆಗೆದಿದ್ದರೆ ಆರು ಜೀವಗಳು ಉಳಿಯುತ್ತಿದ್ದವು.’

ಸ್ಥಳೀಯ ನಿವಾಸಿಗಳ ಅಭಿಪ್ರಾಯವಿದು. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಈ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಕಾಲುವೆಗಿಂತ 4–5 ಅಡಿ ಎತ್ತರಕ್ಕೆ ನೀರು ಹರಿದಿತ್ತು. ಇದರಿಂದ ಕಾಲುವೆ ಆಸುಪಾಸಿನ ಮನೆಗಳು ಜಲಾವೃತಗೊಂಡಿದ್ದವು. ಈ ವೇಳೆ ಮೂವರು ಕೊಚ್ಚಿ ಹೋಗಿದ್ದರು. ಕಾಲುವೆ ಪಕ್ಕದಲ್ಲಿರುವ ಮನೆ ಗೋಡೆ ಕುಸಿದು ದಂಪತಿ ಮೃತಪಟ್ಟಿದ್ದರು. ಮೇ ತಿಂಗಳಲ್ಲಿ ಶಾಂತಕುಮಾರ್‌ ಎಂಬುವರು ಸಹ ಕೊಚ್ಚಿ ಹೋಗಿದ್ದರು.

ಯಶವಂತಪುರದ ಕಡೆಯಿಂದ ಬರುವ ಈ ಕಾಲುವೆಯು ಕುರುಬರಹಳ್ಳಿ, ಲಗ್ಗೆರೆ ಮಾರ್ಗವಾಗಿ ಬಸವೇಶ್ವರನಗರ, ವೃಷಭಾವತಿ ನಗರ ಮೂಲಕ ಜ್ಞಾನಭಾರತಿ ಕ್ಯಾಂಪಸ್‌ ಬಳಿ ವೃಷಭಾವತಿ ಕಾಲುವೆಗೆ ಸೇರುತ್ತದೆ.

ADVERTISEMENT

‘ಮಳೆಗಾಲಕ್ಕೂ ಮುನ್ನವೇ ಕಾಲುವೆಯಲ್ಲಿ ಹೂಳು ತೆಗೆದಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಗಳಿಗೆ ಕಾರಣ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಈ ಕಾಲುವೆ ಸುಮಾರು 20 ಅಡಿ ಆಳವಿದೆ. ಆದರೆ, 8–10 ಅಡಿಗಳಷ್ಟು ಹೂಳು ತುಂಬಿಕೊಂಡಿದೆ. ಇದರಿಂದ ಕಾಲುವೆಗಿಂತ ಎತ್ತರದಲ್ಲಿ ನೀರು ಹರಿದಿತ್ತು. ನಮ್ಮ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಈ ಹೂಳು ತೆಗೆದಿದ್ದರೆ ಎಷ್ಟೇ ನೀರು ಬಂದಿದ್ದರೂ ಕಾಲುವೆಯಲ್ಲೇ ಹರಿದು ಹೋಗುತ್ತಿತ್ತು. ಇದರಿಂದ ಅಮಾಯಕ ಜೀವಗಳು ಉಳಿಯುತ್ತಿ ದ್ದವು’ ಎಂದು ಕುರುಬರಹಳ್ಳಿಯ 23ನೇ ಮುಖ್ಯರಸ್ತೆಯ ನಿವಾಸಿ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು 30 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಇಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸುವ ಮುನ್ನ ಇಂತಹ ಪ್ರವಾಹ ಉಂಟಾಗಿತ್ತು. ಬಳಿಕ ಯಾವುದೇ ಅನಾಹುತ ನಡೆದಿರಲಿಲ್ಲ. ಶುಕ್ರವಾರ ಬಿದ್ದ ಮಳೆಯಿಂದ ನಮ್ಮ ಮನೆಯಲ್ಲಿ 8 ಅಡಿ ನೀರು ನಿಂತಿತ್ತು. ಮನೆಯಲ್ಲಿದ್ದ ಎಲ್ಲ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಆಗಿದೆ. ದಿನಸಿ ವಸ್ತುಗಳು ಹಾಳಾಗಿದ್ದು, ತಿಂಡಿ–ಊಟಕ್ಕೆ ಪಡಿಪಾಟಲು ಅನುಭವಿಸುವಂತಾಗಿದೆ’ ಎಂದು ಪುಟ್ಟಣ್ಣ ಅಳಲುತೋಡಿಕೊಂಡರು.

ಮಳೆಯ ನೆಪ ಹೇಳುವ ಅಧಿಕಾರಿಗಳು: ಮಳೆಗಾಲ ಶುರುವಾಗುವ ಮುನ್ನವೇ ನಗರದಲ್ಲಿರುವ ಎಲ್ಲ ರಾಜಕಾಲುವೆಗಳ ಹೂಳನ್ನು ತೆರವುಗೊಳಿಸಬೇಕು. ಆದರೆ, ಬಹುತೇಕ ಕಾಲುವೆಗಳಲ್ಲಿ ಹೂಳು ತೆರವುಗೊಳಿಸಿಲ್ಲ.

‘ನಾನು ಈ ವಿಭಾಗಕ್ಕೆ ಬಂದು ಎರಡು ತಿಂಗಳಾಯಿತು. ಆಗಸ್ಟ್‌ 14ರಿಂದಲೂ ನಗರದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಇದರಿಂದ ಕಾಲುವೆಗಳಲ್ಲಿ ಹೂಳು ತೆಗೆಯಲು ಸಾಧ್ಯವಾಗಿಲ್ಲ. ಪ್ರವಾಹದ ಪರಿಸ್ಥಿತಿ ಉಂಟಾಗಿರುವ ಕಡೆಗಳಲ್ಲಿ ಹೂಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಾಜಕಾಲುವೆ ವಿಭಾಗ) ಬೆಟ್ಟೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಬರುವಾಗ ಹೂಳು ತೆಗೆಯಬಹುದು. ಆದರೆ, ಮತ್ತೆ ಹೂಳು ತುಂಬಿಕೊಳ್ಳುತ್ತದೆ. ಹೀಗಾಗಿ, ಪ್ರವಾಹ ಉಂಟಾಗುತ್ತಿರುವ ಪ್ರದೇಶಗಳಿಗೆ ಒತ್ತು ನೀಡಿದ್ದೇವೆ. ಎಚ್‌ಎಸ್‌ಆರ್‌ ಬಡಾವಣೆ, ಕೋರಮಂಗಲ 4ನೇ ಬ್ಲಾಕ್‌, ಶಾಂತಿನಗರ ಬಿಎಂಟಿಸಿ ಡಿಪೊ, ಡಾಲರ್ಸ್‌ ಕಾಲನಿ, ಕುಂಬಾರಗುಂಡಿ ಭಾಗದಲ್ಲಿ ಹೂಳು ತೆಗೆಯುತ್ತಿದ್ದೇವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.