ತಲಘಟ್ಟಪುರ: ಅಂಜನಾಪುರ ವಾರ್ಡ್ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ರೂ. 1.40 ಕೋಟಿ ವೆಚ್ಚದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಇತ್ತೀಚೆಗೆ ಚಾಲನೆ ನೀಡಿದರು.
ರಾಜಕಾಲುವೆಯಲ್ಲಿ ನೀರು ಸರಾಗ ಹರಿಯದೇ ಹರಿನಗರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರು ನರಕ ಯಾತನೆ ಅನುಭವಿಸುವಂತಾಗಿತ್ತು. ಗಾಳಿ ಮತ್ತು ಮಳೆ ಬಂದಾಗ ಅಲ್ಲಿನ ಜನರು ಕೆಟ್ಟವಾಸನೆ ಕುಡಿಯುವುದರ ಜೊತೆಗೆ ಅನೇಕ ಕಾಯಿಲೆಗಳಿಂದ ತುತ್ತಾಗುತ್ತಿದ್ದರು. ಈ ಬಗ್ಗೆ `ಪ್ರಜಾವಾಣಿ~ಯಲ್ಲಿ ಈಚೆಗೆ ವರದಿ ಪ್ರಕಟವಾಗಿತ್ತು.
ರಾಜಕಾಲುವೆ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೃಷ್ಣಪ್ಪ ಮಾತನಾಡಿ `ಅತಿ ಹಿಂದುಳಿದ ಮತ್ತು ಹೊಸದಾಗಿ ಪಾಲಿಕೆ ವ್ಯಾಪ್ತಿಗೆ ಪ್ರದೇಶಗಳಿಗೆ ಪಾಲಿಕೆ ಹೆಚ್ಚಿನ ಅನುದಾನ ನೀಡಬೇಕು.
ಹರಿನಗರ, ಕೊತ್ತನೂರು ಸುತ್ತಮುತ್ತ ಖಾಸಗಿ ಲೇಔಟ್, ಬಹುಮಹಡಿ ಕಟ್ಟಡ, ಮನೆ ನಿರ್ಮಿಸಿರುವುದರಿಂದ ಶೌಚಾಲಯದ ನೀರು ತಗ್ಗುಪ್ರದೇಶಗಳಿಗೆ ಹರಿದು ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು~ ಎಂದರು.
ಇದೇ ಸಂದರ್ಭದಲ್ಲಿ ಶಾಸಕರು, ಸ್ಥಳೀಯ ಪಾಲಿಕೆ ಸದಸ್ಯ ಎಸ್.ಗಂಗಾಧರ್ ಅವರ ಜತೆಗೂಡಿ ತಿಪ್ಪಸಂದ್ರ ಕಾಲೋನಿ , ಗೊಲ್ಲಹಳ್ಳಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ, ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.