ADVERTISEMENT

ರಾಜಧಾನಿಗೆ ರೂ 4,770 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:10 IST
Last Updated 24 ಫೆಬ್ರುವರಿ 2011, 20:10 IST

ಬೆಂಗಳೂರು: ಸತತ ಆರನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಒಟ್ಟು ರೂ 4,770 ಕೋಟಿ ರೂಪಾಯಿಗಳನ್ನು ತೆಗೆದಿರಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನೂ ಪ್ರಕಟಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಸಾರಿಗೆ ದಟ್ಟಣೆಯನ್ನು ವಿಶೇಷವಾಗಿ ಪ್ರಸ್ತಾಪಿಸಿರುವ ಅವರು, ವಾಹನ ದಟ್ಟಣೆ ನಿವಾರಿಸಲು ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಜೆ.ಸಿ.ರಸ್ತೆ ಮೂಲಕ ಮೇಲಂತಸ್ತಿನ ನಿರ್ಮಾಣ, ಕಾರ್ಡ್ ರಸ್ತೆ, ಫೌಂಟೇನ್ ವೃತ್ತ, ಕನಕಪುರ ಹೊರ ವರ್ತುಲ ಕೂಡು ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತಗಳಲ್ಲಿ ಮೇಲು ಹಾಗೂ ಕೆಳ ರಸ್ತೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ನಗರದ ವಿವಿಧೆಡೆ 10 ನೂತನ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಹೆಬ್ಬಾಳದಿಂದ ಕೇಂದ್ರ ರೇಷ್ಮೆ ಮಂಡಳಿ ಕೇಂದ್ರದವರೆಗೆ ರೂ 550 ಕೋಟಿ ವೆಚ್ಚದಲ್ಲಿ ‘ಬೆಂಗಳೂರು ಕ್ಷಿಪ್ರ ಬಸ್ ಸಾರಿಗೆ ವ್ಯವಸ್ಥೆ’ಯನ್ನು ರೂಪಿಸಲಾಗುವುದು. ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ ರೂ 25 ಕೋಟಿ ಹಣವನ್ನು ಮೀಸಲಿಡಲಾಗಿದೆ.

ಎರಡು ಕಾರಿಡಾರ್‌ಗಳಿಗೆ ಮಾನೋ ಅಥವಾ ಹಗುರ ರೈಲು ಸಾರಿಗೆ ವ್ಯವಸ್ಥೆ ರೂಪಿಸಲು ಯೋಜನಾ ವರದಿ ರೂಪಿಸಲಾಗುತ್ತಿದ್ದು, ಹೆಬ್ಬಾಳದಿಂದ ಜೆ.ಪಿ.ನಗರ (31 ಕಿ.ಮೀ.) ಮತ್ತು ಫೆರಿಫೆರಲ್ ರಿಂಗ್ ರಸ್ತೆಯಿಂದ ಮಾಗಡಿ ರಸ್ತೆಯ ಮೂಲಕ ಟೋಲ್‌ಗೇಟ್‌ವರೆಗೆ (9 ಕಿ.ಮೀ.) ರೈಲು ಸಾರಿಗೆ ಪರಿಚಯಿಸುವ ಯೋಜನಾ ವರದಿ ತಯಾರಿಸಲಾಗುವುದು ಎಂದು ತಿಳಿಸಲಾಗಿದೆ.

ಮೆಟ್ರೊ ರೈಲು 2013ಕ್ಕೆ ಪೂರ್ಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ 42.3 ಕಿ.ಮೀ. ಉದ್ದದ ‘ನಮ್ಮ ಮೆಟ್ರೊ’ ಯೋಜನೆಯು 2013ರ ಜೂನ್‌ನಲ್ಲಿ ಪೂರ್ಣಗೊಳ್ಳಲಿದ್ದು, ಮೊದಲ ಹಂತ ಪೂರ್ಣಗೊಳಿಸಲು ರಾಜ್ಯವು ರೂ 683 ಕೋಟಿ ಹಣವನ್ನು ತೆಗೆದಿರಿಸಿದೆ. ಸುಮಾರು 71 ಕಿ.ಮೀ. ದೂರದ 6 ಮಾರ್ಗಗಳ ಎರಡನೇ ಹಂತದ ಮೆಟ್ರೊ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದೂ ತಿಳಿಸಲಾಗಿದೆ.
ನೆರೆಯ ಪಟ್ಟಣಗಳಿಗೆ ರೈಲು: ನಗರದ ಹೊರವಲಯದಲ್ಲಿ ನೆಲೆಸಿರುವ ಸಾರ್ವಜನಿಕರು ವಿವಿಧ ವ್ಯಾಪಾರ ಕೇಂದ್ರಗಳಿಗೆ ಸಂಚರಿಸಲು ಬೆಂಗಳೂರಿನಿಂದ ದೇವನಹಳ್ಳಿ, ಆನೇಕಲ್, ಮಾಲೂರು, ರಾಮನಗರ, ನೆಲಮಂಗಲದವರೆಗೆ ರೈಲ್ವೆ ಸೇವೆ ಒದಗಿಸಲು ಇಲಾಖೆಯ ಅನುಮತಿ ಕೋರಿದ್ದು, ತನ್ನ ಪಾಲನ್ನು ಭರಿಸುವುದಾಗಿಯೂ ಸರ್ಕಾರ ಬಜೆಟ್‌ನಲ್ಲಿ ತಿಳಿಸಿದೆ.

ಬಡಾವಣೆಗಳ ನಿರ್ಮಾಣ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಈ ಸಾಲಿನಲ್ಲಿ ರೂ 750 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ ಮತ್ತು ಡಾ. ಶಿವರಾಮ ಕಾರಂತ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನ ಹಾಗೂ ಮನೆಗಳನ್ನು ವಿತರಿಸುವ ಬಗ್ಗೆಯೂ ಪ್ರಸ್ತಾಪವಿದೆ. ಆರ್ಥಿಕವಾಗಿ ದುರ್ಬಲರಾದವರಿಗೆ 30.000 ಮನೆಗಳ ನಿರ್ಮಾಣ. ದೇವರಾಜ ಅರಸು ಬಡಾವಣೆ, ನಿಜಲಿಂಗಪ್ಪ ಬಡಾವಣೆ ಮತ್ತು ಕೆ.ಸಿ.ರೆಡ್ಡಿ ಬಡಾವಣೆ ನಿರ್ಮಿಸಲು ಅನುಮತಿ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಬಡಾವಣೆ ನಿರ್ಮಿಸುತ್ತಿರುವುದು ವಿಶೇಷವಾಗಿದೆ.
ಕೆರೆಗಳ ಪುನಶ್ಚೇತನ: ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನಗರದ 29 ಕೆರೆಗಳನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ. ಜೊತೆಗೆ 12 ಉದ್ಯಾನವನಗಳು ಹಾಗೂ ಮನರಂಜನಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ವಾಗ್ದಾನವನ್ನೂ ನೀಡಲಾಗಿದೆ.

ಶಿಲ್ಪಕಲಾ ಉದ್ಯಾನವನ: ಇಡೀ ದೇಶದಲ್ಲಿ ಮೊಟ್ಟಮೊದಲು ಎಂದು ಹೇಳಲಾದ ಶಿಲ್ಪಕಲಾ ಉದ್ಯಾನವನ್ನು ನಗರದಲ್ಲಿ 8 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಆದರೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬುದರ ಪ್ರಸ್ತಾಪ ಇಲ್ಲ.
ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ: ಮೇಲಿಂದ ಮೇಲೆ ಸಮ್ಮೇಳನಗಳನ್ನು ಆಯೋಜಿಸುತ್ತಿರುವ ಸರ್ಕಾರ, ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಐಎಡಿಬಿ ಸಹಯೋಗದಲ್ಲಿ ರೂ 150 ಕೋಟಿ ವೆಚ್ಚದಲ್ಲಿ ಸಮ್ಮೇಳನ ಕೇಂದ್ರ ನಿರ್ಮಿಸುವ ಗುರಿಯನ್ನು ಹೊಂದಿದೆ. ಬರುವ 15 ತಿಂಗಳಲ್ಲಿ ಇದು ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.

ಬಿಜಿನೆಸ್ ಪಾರ್ಕ್: ದೇವನಹಳ್ಳಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 230 ಎಕರೆ ವ್ಯಾಪ್ತಿಯಲ್ಲಿ ವಾಣಿಜ್ಯ ಪಾರ್ಕ್ ಒಂದನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ರೂ 5.000 ಕೋಟಿ ವ್ಯಯ ಮಾಡಲಿದೆ.

ನಾಲ್ಕು ಬೃಹತ್ ಆಸ್ಪತ್ರೆಗಳು:ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಬೃಹತ್ ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕೂ ಎಷ್ಟು ಹಣ ಎಂಬುದರ ಉಲ್ಲೇಖ ಇಲ್ಲ.

ನಿರ್ವಹಣೆ ಘಟಕ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಗಳಲ್ಲಿ ಯೋಜನಾ ಕಾಮಗಾರಿಗಳ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಕಾರ್ಯಕ್ಷಮತೆ ಹಾಗೂ ಪಾರದರ್ಶಕತೆ ಹೆಚ್ಚಿಸಲು ನೂತನ ‘ನಿರ್ವಹಣೆ ಯೋಜನಾ ಘಟಕ’ವನ್ನು ಸ್ಥಾಪಿಸಲಾಗುವುದು. ಪಾಲಿಕೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಒಟ್ಟು ರೂ 350 ಕೋಟಿಯನ್ನು ಸರ್ಕಾರ ಬಿಬಿಎಂಪಿಗೆ ಬಿಡುಗಡೆ ಮಾಡಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.