ADVERTISEMENT

ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 19:30 IST
Last Updated 8 ಆಗಸ್ಟ್ 2011, 19:30 IST
ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಚಾಲನೆ
ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಚಾಲನೆ   

ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 67ನೇ ಜನ್ಮದಿನದ ಅಂಗವಾಗಿ ಕೆಪಿಸಿಸಿಯ ಕಾರ್ಮಿಕ ಘಟಕ ಹಮ್ಮಿಕೊಂಡಿರುವ `ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆ~ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸೋಮವಾರ ಇಲ್ಲಿ ಚಾಲನೆ ನೀಡಿದರು.

ಕೆಪಿಸಿಸಿ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೇಶಪಾಂಡೆ, `ಕೋಮುವಾದ, ಭಯೋತ್ಪಾದನೆ, ಅಶಾಂತಿ ತೊಲಗಿಸುವಲ್ಲಿ ರಾಜೀವ್ ಗಾಂಧಿ ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವುದು. ನಕ್ಸಲ್‌ವಾದ ತಡೆಯುವಲ್ಲಿ ರಾಷ್ಟ್ರದ ಪೊಲೀಸ್ ಪಡೆಗಳೊಂದಿಗೆ ನಾಗರಿಕರು ಕೈಜೋಡಿಸುವಂತೆ ಮಾಡುವುದೂ ಈ ಯಾತ್ರೆಯ ಉದ್ದೇಶ~ ಎಂದು ತಿಳಿಸಿದರು.

ಇದು 20ನೇ ವರ್ಷದ ಯಾತ್ರೆಯಾಗಿದ್ದು, ಮಂಗಳವಾರ ಬೆಳಿಗ್ಗೆ 9.30ಕ್ಕೆ ತಮಿಳುನಾಡಿದ ಶ್ರೀಪೆರಂಬದೂರು ತಲುಪಲಿದೆ. ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಪುದುಚೇರಿಯ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ಪ್ರಕಾಶಂ ತಿಳಿಸಿದರು.
 
ಅಲ್ಲಿಂದ ತೆರಳುವ ಯಾತ್ರೆ ಇದೇ 19ರಂದು ನವದೆಹಲಿ ತಲುಪಲಿದೆ. 20ರಂದು ರಾಜೀವ್ ಗಾಂಧಿ ಅವರ ಸಮಾಧಿ ಸ್ಥಳವಾದ ವೀರಭೂಮಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ, ಶಾಸಕ ರಾಮಲಿಂಗಾ ರೆಡ್ಡಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.