ಯಲಹಂಕ: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಷಿಯೇಷನ್‌ನ ನೂತನ ಅಧ್ಯಕ್ಷರಾಗಿ ಎಂ.ಹನುಮಂತೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಂ.ಎಸ್.ಪಾಳ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹನುಮಂತೇಗೌಡ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ತುಮಕೂರಿನ ಸಿ.ಶಿವಮೂರ್ತಿ, ಕಾರ್ಯದರ್ಶಿಯಾಗಿ ಹಿರಿಯೂರಿನ ಎ.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ಮುನಿರಾಜು, ಖಜಾಂಚಿಯಾಗಿ ಬ್ಯಾಡಗಿಯ ಶಿವಾನಂದ ಮಲ್ಲನಗೌಡರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕೇವಲ ಐದು ಸ್ಥಾನಗಳಿಗೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇನ್ನುಳಿದ ಸದಸ್ಯರನ್ನು ಅಧ್ಯಕ್ಷರ ನೇತೃತ್ವದ ಸಭೆಯಲ್ಲಿ ಅಂತಿಮಗೊಳಿಸುವಂತೆ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತು. ಅದರಂತೆ ಮಧ್ಯಾಹ್ನ 1.30ಕ್ಕೆ ನೂತನ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಆಯ್ಕೆ: ಪಿ.ಎಂ.ಸೋಮಶೇಖರ (ಚೇರ‌್ಮನ್) ಸಿ.ಎಸ್.ಬರಗಾಲಿ, ಮೋಹನ್ ಹಿರೇಮನಿ, ಪುರುಷೋತ್ತಮ್ ಪೂಜಾರಿ (ಉಪಾಧ್ಯಕ್ಷರು) ಹಾಗೂ ಜಂಟಿ ಕಾರ್ಯದರ್ಶಿಗಳಾಗಿ ರಾಜೇಂದ್ರ ಸುವರ್ಣ, ಎಂ.ಎಚ್.ಮುಕ್ಕಣ್ಣವರ್ ಅವರನ್ನು ಆಯ್ಕೆ ಮಾಡಲಾಯಿತು.
ವೀಕ್ಷಕರಾಗಿ ಅಮೆಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡು ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಷಫೀವುಲ್ಲಾ, ಕರ್ನಾಟಕ ಒಲಂಪಿಕ್ ಅಸೋಷಿಯೇಷನ್‌ನ ಜಂಟಿ ಕಾರ್ಯದರ್ಶಿ ಪ್ರಕಾಶ್ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.