ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 19:30 IST
Last Updated 8 ನವೆಂಬರ್ 2012, 19:30 IST

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್, ಇದೇ 10ರಂದು ರಾಜ್ಯ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಅಂದು ಬೆಳಿಗ್ಗೆ 11ಕ್ಕೆ `ಕೆಲಸ ಮಾಡಿ-ಇಲ್ಲ ಅಧಿಕಾರ ಬಿಡಿ~ ಘೋಷಣೆಯೊಂದಿಗೆ ಸ್ವತಂತ್ರ ಉದ್ಯಾನದಿಂದ ಮುಖ್ಯಮಂತ್ರಿಯವರ ನಿವಾಸದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ತಿಳಿಸಿದರು.

`ಭ್ರಷ್ಟಾಚಾರವನ್ನೇ ಮೂಲಮಂತ್ರವನ್ನಾಗಿ ಮಾಡಿಕೊಂಡ ಸರ್ಕಾರ, ಹಿಂದೆಂದೂ ಕಂಡರಿಯದ ಅರಾಜಕತೆ  ಸೃಷ್ಟಿಸಿದೆ. ಇಷ್ಟು ದಿನ ಜನರ ಹಾದಿ ತಪ್ಪಿಸುವ ಕೆಲಸ ಮಾಡಿದ್ದು ಸಾಕು. ಇನ್ನಾದರೂ ಜನೋಪಕಾರಿ ಕೆಲಸ ಮಾಡಲಿ~ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`4 ವರ್ಷಗಳ ಆಡಳಿತಾವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾದರೂ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. `ಯುವ ಬಜೆಟ್~, `ಸಾವಯವ ಕೃಷಿ~ ಬಗ್ಗೆ ಮಾತನಾಡಿ ಪ್ರಚಾರ ಪಡೆದಿದ್ದೇ ಆಯಿತು. ಕೆಲಸ ಮಾತ್ರ ಶೂನ್ಯ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

`ವಿಫಲವಾದ ಈ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಕನಸಿನ ಮಾತು. ಆದರೆ ಇನ್ನು ಉಳಿದಿರುವಷ್ಟು ದಿನವಾದರೂ ಉತ್ತಮ ಕೆಲಸ ಮಾಡಲಿ~ ಎಂದು ರಿಜ್ವಾನ್ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.