ADVERTISEMENT

ರಾಷ್ಟ್ರೀಯ ಜಲನೀತಿ ರೂಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 20:08 IST
Last Updated 16 ಜೂನ್ 2013, 20:08 IST
ನದಿ ನೀರಿನ ಸಮರ್ಪಕ ಹಂಚಿಕೆಗಾಗಿ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಭಾನುವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು
ನದಿ ನೀರಿನ ಸಮರ್ಪಕ ಹಂಚಿಕೆಗಾಗಿ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಭಾನುವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು   

ಬೆಂಗಳೂರು:  `ನದಿ ನೀರಿನ ಸಮರ್ಪಕ ಹಂಚಿಕೆಗಾಗಿ ರಾಷ್ಟ್ರೀಯ ಜಲನೀತಿಯನ್ನು ರೂಪಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು' ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದರು.

ಕಾವೇರಿ ಉಳಿವಿಗಾಗಿ ಭಾನುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರವು ಕಾವೇರಿ ನೀರಿನ ಹಂಚಿಕೆ ಸಂಬಂಧ ರಚಿಸಿರುವ ಕಾವೇರಿ ಮೇಲುಸ್ತುವಾರಿ ಸಮಿತಿಯು ರಾಜ್ಯದ ನದಿಗಳು, ಜಲಾಶಯಗಳ ವಿಚಾರದಲ್ಲಿ ರಾಜ್ಯದ ಮೇಲೆ ಸವಾರಿ ಮಾಡುತ್ತಿದೆ.

ಈ ಧೋರಣೆಯನ್ನು ಬಿಡಬೇಕು. ಬದಲಿಗೆ ನೀರಿನ ಹಂಚಿಕೆಗಾಗಿ ರಾಷ್ಟ್ರೀಯ ಜಲನೀತಿಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರದ ಶಾಸಕರು, ಸಚಿವರು ಜವಾಬ್ದಾರಿಯುತವಾಗಿ ವರ್ತಿಸಬೇಕು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿನ ವಸ್ತುಸ್ಥಿತಿಯನ್ನು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ರಾಜ್ಯ ನೀರು ಬಿಡದ ಕಾರಣ ತಮಿಳುನಾಡಿಗೆ ರೂ 2,500 ಕೋಟಿ ಬೆಳೆ ನಷ್ಟವಾಗಿದೆ ಎಂಬ ಆರೋಪದ ಜತೆಗೆ ಕರ್ನಾಟಕ ಸರ್ಕಾರವು ಬೆಳೆ ಪರಿಹಾರವನ್ನು ಭರಿಸಬೇಕು ಮತ್ತು 53 ಟಿಎಂಸಿ ನೀರು ಬಿಡಬೇಕು ಎಂಬ ತಮಿಳುನಾಡಿನ ಬೇಡಿಕೆಯಲ್ಲಿ ನ್ಯಾಯವಿಲ್ಲ.

ADVERTISEMENT

ಹೀಗಾಗಿ ರಾಜ್ಯ ಸರ್ಕಾರವು ಇಂತಹ ಒತ್ತಡಗಳಿಗೆ ಮಣಿಯಬಾರದು. ಕಾವೇರಿ ವಿಚಾರದಲ್ಲಿ ನಾಡಿನ ಜನತೆ ನಿರಂತರ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.ನಂತರ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಥಾ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.