ADVERTISEMENT

ರೂ 8.61 ಕೋಟಿ ಮೌಲ್ಯದ ವಸ್ತುಗಳ ವಶ

ಉತ್ತರ, ಪಶ್ಚಿಮ, ಈಶಾನ್ಯ ವಿಭಾಗದ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:56 IST
Last Updated 1 ಜುಲೈ 2013, 19:56 IST

ಬೆಂಗಳೂರು: ನಗರದ ಉತ್ತರ, ಪಶ್ಚಿಮ ಹಾಗೂ ಈಶಾನ್ಯ ವಿಭಾಗದ ಪೊಲೀಸರು ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿ ಸುಮಾರು ರೂ 8.61 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ನಗರ ಪೊಲೀಸರು ಇಷ್ಟು ಪ್ರಮಾಣದಲ್ಲಿ ಪ್ರಕರಣಗಳನ್ನು ಪತ್ತೆ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

`ಪೊಲೀಸರು ಜಪ್ತಿ ಮಾಡಿದ ವಸ್ತುಗಳ ಪ್ರದರ್ಶನವನ್ನು ನಿಯಮಿತವಾಗಿ ನಡೆಸುವುದರಿಂದ ಜನರಲ್ಲಿ ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸ ವೃದಿ ಜತೆಗೆ, ಅಪರಾಧ ಚಟುವಟಿಕೆಗಳ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಲು ಸಹಕಾರಿಯಾಗುತ್ತದೆ' ಎಂದರು.

`ಸಿಬ್ಬಂದಿ ಆರು ತಿಂಗಳಲ್ಲಿ 637 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ 475 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 18 ಕೆ.ಜಿ ಚಿನ್ನಾಭರಣ, 26 ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ರೂ 31.80 ಲಕ್ಷ ನಗದು ಜಪ್ತಿ ಮಾಡಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ತಿಳಿಸಿದರು.

ವಶಪಡಿಸಿಕೊಂಡ ವಸ್ತುಗಳನ್ನು ಅವುಗಳ ವಾರಸುದಾರರಿಗೆ ಒಪ್ಪಿಸಲಾಯಿತು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಸ್.ಮುರುಗನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಆಧುನಿಕ ಉಪಕರಣಗಳ ಪೂರೈಕೆ
`ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿಗೆ ಆಧುನಿಕ ಉಪಕರಣಗಳನ್ನು ಪೂರೈಸುವ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಸೈಬರ್ ಅಪರಾಧ ತಡೆಗಾಗಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಗುಪ್ತಚರ ದಳಕ್ಕೆ ಅತ್ಯಾಧುನಿಕ ಉಪಕರಣಗಳನ್ನು ಪೂರೈಸಲಾಗುವುದು'
-ಕೆ.ಜೆ.ಜಾರ್ಜ್, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT