ADVERTISEMENT

ರೆಕ್ಟರ್‌ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:44 IST
Last Updated 22 ಮಾರ್ಚ್ 2014, 19:44 IST

ಬೆಂಗಳೂರು: ‘ಮಲ್ಲೇಶ್ವರದ ಸೇಂಟ್‌ ಪೀಟರ್ಸ್‌ ಪೊಂಟಿಫಿಕಲ್‌ ಸೆಮಿನರಿಯ ರೆಕ್ಟರ್‌ (ಮುಖ್ಯಸ್ಥ) ಕೆ.ಜೆ.ಥಾಮಸ್‌ ಕೊಲೆ ಪ್ರಕರಣ ಸಂಬಂಧ ಫಾದರ್ ವಿಲಿಯಂ ಪ್ಯಾಟ್ರಿಕ್‌ ಮತ್ತು ಫಾದರ್‌ ಇಲಿಯಾಸ್‌ ಅವರನ್ನು ಬಂಧಿಸುವ ಮೂಲಕ ಕನ್ನಡ ಕ್ರೈಸ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ’ ಎಂದು ರಾಜ್ಯ ಕನ್ನಡ ಧರ್ಮಗುರುಗಳ ಬಳಗದ ಫಾದರ್‌ ಚ.ಸರಾ ಅವರು ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರೆಕ್ಟರ್‌ ಕೊಲೆ ಪ್ರಕರಣವನ್ನು ಒಂದು ತಿಂಗಳ ಒಳಗೆ ಮುಗಿಸಬೇಕು ಎಂದು ಮುಖ್ಯಮಂತ್ರಿಗಳಿಂದ ಒತ್ತಡ ಬಂದಿದ್ದರಿಂದ ಅಮಾಯಕರನ್ನು ಬಂಧಿಸಲಾಗಿದೆ. ಇದರಲ್ಲಿ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌, ಗೃಹ ಸಚಿವ ಕೆ.ಜೆ.ಜಾರ್ಜ್‌ ಮತ್ತು ಡಿಸಿಪಿ ವಿಕ್ಟರ್‌ ಡಿಸೋಜಾ ಅವರ ಕುತಂತ್ರ ಅಡಗಿದೆ’ ಎಂದು ದೂರಿದರು.

ರಾಜ್ಯದಲ್ಲಿ ಕನ್ನಡ ಕ್ರೈಸ್ತರನ್ನು ಹತ್ತಿಕ್ಕಲು ಈ ಹುನ್ನಾರ ನಡೆಯುತ್ತಿದೆ. ಕನ್ನಡ ಧರ್ಮಗುರುಗಳ ಬಳಗದ ಕನ್ನಡಪರ ಹೋರಾಟಕ್ಕೆ ಬೆಂಬಲ ನೀಡಿದ ಉದ್ದೇಶಕ್ಕೆ ಅವರನ್ನು ಬಂಧಿಸಲಾಗಿದೆ ಎಂದರು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸೆಮಿನರಿಗಳ 150 ವರ್ಷಗಳ ಇತಿಹಾಸದಲ್ಲಿ ರೆಕ್ಟರ್‌ ಒಬ್ಬರ ಕೊಲೆಯಾಗಿದೆ.
ಸೆಮಿನರಿಗಳ ಆಡಳಿತ ಮಂಡಳಿಯ ಅಧ್ಯಕ್ಷರು ಆರ್ಚ್‌ ಬಿಷಪ್‌ ಆಗಿರುವುದರಿಂದ  ಬರ್ನಾರ್ಡ್‌ ಮೊರಾಸ್‌ ಅವರು ನೈತಿಕ ಹೊಣೆ ಹೊತ್ತು ಕೂಡಲೆ  ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಆರ್ಚ್‌ ಬಿಷಪ್‌ ಮೊರಾಸ್‌ ಅವರು ರೋಮ್‌ಗೆ ಹೋಗುತ್ತಿದ್ದಾರೆ. ಪ್ರಕರಣದ ತನಿಖೆ ಮುಗಿಯುವವರೆಗೂ ಅವರ ವಿದೇಶ ಪ್ರವಾಸ ತಡೆಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.

ಪೊಲೀಸರು ಅಭಿನಂದನಾರ್ಹರು
ಒಂದು ವರ್ಷದ ಹಿಂದೆ ನಡೆದ  ರೆಕ್ಟರ್‌ ಕೆ.ಜೆ. ಥಾಮಸ್‌ ಕೊಲೆ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸಿ, ಕೊಲೆಗಾರರನ್ನು ಬಂಧಿಸಿರುವ ಪೊಲೀಸರು ಅಭಿನಂದನಾರ್ಹರು ಎಂದು ಸಮಾಜ ಸೇವಕ ಟಿ.ಜೆ.ಅಬ್ರಹಾಂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕೊಲೆಯ ಹಿಂದಿರುವ ವ್ಯಕ್ತಿಗಳು ಯಾರು? ಎಂಬುದನ್ನು ಪತ್ತೆ ಹಚ್ಚಬೇಕು. ಕೊಲೆಗಡುಕರ ವಿರುದ್ಧ ಧರ್ಮಕ್ಷೇತ್ರವು ಕಠಿಣ ಕ್ರಮ ಕೈಗೊಳ್ಳಬೇಕು. ಕ್ರೈಸ್ತ ಸಮುದಾಯದಿಂದಲೇ ಅವರನ್ನು ಬಹಿಷ್ಕರಿಸಬೇಕು ಎಂದು ಪ್ರಕಟಣೆಯಲ್ಲಿ  ಅಬ್ರಹಾಂ ಸೇರಿದಂತೆ ಕಾರ್ಮೆಲ್‌ ಕುಟಾಮ್‌ ಕಾರ್ಯದರ್ಶಿ ಎಡ್ವಿನ್‌ ಡಿಸೋಜ,  ಜಂಟಿ ಕಾರ್ಯದರ್ಶಿ ರಿಚರ್ಡ್‌ ಡಿಸೋಜ, ಆರ್‌ಕೆಸಿಡಬ್ಲ್ಯೂಎ ಕಾರ್ಯದರ್ಶಿ ಡೊಲ್ಪಿ ಡಿಕುನ್ಹಾ  ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT