ADVERTISEMENT

ರೇಷ್ಮೆ ಆಮದು ವಿರೋಧಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 18:30 IST
Last Updated 15 ಮಾರ್ಚ್ 2011, 18:30 IST

ಆನೇಕಲ್ : ಕೇಂದ್ರ ಸರ್ಕಾರ ಕಚ್ಚಾ ರೇಷ್ಮೆ ಆಮದನ್ನು ತಕ್ಷಣ ನಿಲ್ಲಿಸಿ ದೇಶದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು. ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಆನೇಕಲ್ ಹಾಗೂ ತಮಿಳುನಾಡಿನ ಹೊಸೂರು ತಾಲ್ಲೂಕಿನ ರೇಷ್ಮೆ ಬೆಳೆಗಾರರ ಜಂಟಿ ಹೋರಾಟ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ರೇಷ್ಮೆ ಆಮದು ನೀತಿಯನ್ನು ಖಂಡಿಸಿ ಏರ್ಪಡಿಸಿದ್ದ ರಸ್ತೆ ತಡೆ ಚಳವಳಿ ಭಾಗವಹಿಸಿ ಮಾತನಾಡಿದರು.

ಕಚ್ಚಾ ರೇಷ್ಮೆ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇ 31ರಿಂದ ಶೇ 5ಕ್ಕೆ ಇಳಿಸಿ ಚೀನಾದಿಂದ 2500 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆಯನ್ನು ಮುಕ್ತವಾಗಿ ಆಮದು ಮಾಡಿಕೊಂಡಿದೆ. ಇದರಿಂದ ರಾಷ್ಟ್ರದ ರೇಷ್ಮೆ ಉದ್ಯಮ ನೆಲಕಚ್ಚಿದೆ. ಇದರ ಫಲವಾಗಿ ರೇಷ್ಮೆ ಬೆಲೆ ಕುಸಿತಗೊಂಡು ರೈತರು ಸಾಲದ ಸಂಕಷ್ಠದಿಂದ ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಕಳೆದ 2 ವರ್ಷಗಳಲ್ಲಿ ರಾಷ್ಟ್ರದಲ್ಲಿ 6ಕೋಟಿ ರೈತರು ವ್ಯವಸಾಯದಿಂದ ವಿಮುಖರಾಗಿದ್ದಾರೆ ಎಂದು ನುಡಿದರು.

ರೇಷ್ಮೆ ಆಮದು ನೀತಿಯನ್ನು ಮಾರ್ಪಾಡು ಮಾಡಬೇಕು, ಕಚ್ಚಾ ರೇಷ್ಮೆಗೆ ಕನಿಷ್ಠ 400 ರೂ. ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಸಕ್ಕರೆ, ಎಣ್ಣೆ ಹಾಗೂ ರೇಷ್ಮೆ ಆಮದಿಗೆ ತಡೆ ಹಾಕಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಸಹ ರೇಷ್ಮೆಗೆ ಪ್ರೋತ್ಸಾಹ ನೀಡಬೇಕು ಎಂದರು. ಕೃಷಿ ಬಜೆಟ್ ಮಂಡನೆ ಮಾಡಿರುವ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ರೂಪಿಸದೆ ಕೇವಲ ರೈತರ ಕಣ್ಣೋರಿಸುವ ತಂತ್ರ ಅನುಸರಿಸಿದೆ ಎಂದು ಟೀಕಿಸಿದರು. 

ಅಡಿಕೆ ಉತ್ಪನ್ನಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕುವುದನ್ನು ನಿಷೇಧಿಸಿರುವುದರಿಂದ ಅಡಿಕೆ ಬೆಲೆ ಸಹ ಕುಸಿತವಾಗಿದೆ. ಆದರೆ ಈ ನಿಷೇಧ ಬಹು ರಾಷ್ಟ್ರೀಯ ಕಂಪನೀಯ ಉತ್ಪನ್ನಗಳಾದ ಚಾಕ್ಲೆಟ್ ಮತ್ತಿತರ ಪದಾರ್ಥಗಳಿಗಿಲ್ಲ ಎಂದು ಟೀಕಿಸಿದರು.ಸರ್ಕಾರಗಳು ನ್ಯಾಯಾಲಯ ಸಹ ರೈತರ ಪರ ಕಾಳಜಿ ತೋರುತ್ತಿಲ್ಲ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಾತ್ರ ರೈತರ ಬಗ್ಗೆ ಮಾತನಾಡುತ್ತವೆ ಎಂದು ಟೀಕಿಸಿದರು. ತಮಿಳುನಾಡು ರಾಜ್ಯ ರೈತ ಸಂಘದ ಡಾ.ಶಿವಸ್ವಾಮಿ ಮಾತನಾಡಿದರು.

ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿ  ಹಸಿರು ಶಾಲುಗಳನ್ನು ಹೊದ್ದ ರೈತರು, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಕೇಂದ್ರ ಸರ್ಕಾರದ ರೇಷ್ಮೆ ಆಮದು ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಕರ್ನಾಟಕ ಹಾಗೂ ತಮಿಳುನಾಡಿನ ಸಾವಿರಾರು ರೈತರು ಗಡಿ ಭಾಗದಲ್ಲಿ ಜಮಾಯಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಜಂಟಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ರಿಗೆ  ಮನವಿ ಸಲ್ಲಿಸಿದರು.

ರೈಲು ತಡೆ (ವಿಜಯಪುರ ವರದಿ):
ಕೇಂದ್ರ ಸರ್ಕಾರದ ಸುಂಕ ರಹಿತ ಚೀನಾ ರೇಷ್ಮೆ ಆಮದು ನೀತಿ ವಿರೋಧಿಸಿ ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆ ಕೃಷಿಕರ ಹಿತರಕ್ಷಣಾ ವೇದಿಕೆ ವತಿಯಿಂದ ರೈಲು ತಡೆ ಚಳವಳಿ ನಡೆಯಿತು. ಈ ಸಂದರ್ಭದಲ್ಲಿ ಬೆಂಗಳೂರು- ಚಿಕ್ಕಬಳ್ಳಾಪುರ ರೈಲನ್ನು ಪ್ರತಿಭಟನಾಕಾರರು ತಡೆ ಹಿಡಿದರು.

ಚಳವಳಿಯಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಮಂದಿ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.