ADVERTISEMENT

ರೇಸ್ ಕುದುರೆ ಮಾಲೀಕರು ಸೈಸ್ಗಳ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಬೆಂಗಳೂರು: ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬೆಂಗಳೂರು ಟರ್ಫ್ ಕ್ಲಬ್‌ನ (ಬಿಟಿಸಿ) ರೇಸ್ ಕುದುರೆಗಳ ಮಾಲೀಕರು, ತರಬೇತುದಾರರು ಮತ್ತು ಕುದುರೆಗಳನ್ನು ಪೋಷಣೆ ಮಾಡುವವರ (ಸೈಸ್) ನಡುವೆ ಬುಧವಾರ ಸಂಜೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ರೇಸ್ ಕುದುರೆಗಳ ಮಾಲೀಕರಾದ ಅರುಣ್‌ಕುಮಾರ್, ಗೋಪಿ ಮತ್ತು ಅವರ ಕಾರು ಚಾಲಕ ಚೇತನ್ ಎಂಬುವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

`ರೇಸ್ ಕುದುರೆಗಳ ಪೋಷಣೆ ಮಾಡುವವರು ವೇತನ ಹೆಚ್ಚಳ ಮಾಡಬೇಕೆಂದು ಹಲವು ದಿನಗಳಿಂದ ಮಾಲೀಕರಿಗೆ ಒತ್ತಾಯಿಸುತ್ತಿದ್ದರು. ಈ ಸಂಬಂಧ ಕುದುರೆಗಳ ಮಾಲೀಕರು, ತರಬೇತುದಾರರು ಮತ್ತು ಪೋಷಣೆ ಮಾಡುವವರ ನಡುವೆ ಮಂಗಳವಾರ ಮಾತುಕತೆ ನಡೆದು ಕರಡು ಒಪ್ಪಂದ ಸಹ ಆಗಿತ್ತು. ಆದರೆ, ಬುಧವಾರ ಸಂಜೆ ಬಿಟಿಸಿ ಆವರಣದಲ್ಲಿ ನಡೆದ ಮತ್ತೊಂದು ಸುತ್ತಿನ ಸಭೆಯಲ್ಲಿ ಸೈಸ್‌ಗಳು ಹೊಸ ಬೇಡಿಕೆಗಳನ್ನು ಮುಂದಿಟ್ಟು ಸಭೆಯಿಂದ ಹೊರ ನಡೆದರು~ ಎಂದು ಬಿಟಿಸಿ ಛೇರ್‌ಮನ್ ಕೆ.ಎಂ.ಶ್ರೀನಿವಾಸ್‌ಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ಅರುಣ್‌ಕುಮಾರ್, ಗೋಪಿ ಮತ್ತು ಚೇತನ್ ಅವರು ಆ ಬೇಡಿಕೆಗಳ ಬಗ್ಗೆ ಚರ್ಚಿಸಿ ಮನವೊಲಿಸಲು ಸೈಸ್‌ಗಳ ಬಳಿ ಹೋದಾಗ ವಾಗ್ವಾದ ನಡೆಯಿತು. ಈ ವೇಳೆ ಸೈಸ್‌ಗಳು ಆ ಮೂವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಕಬ್ಬಿಣದ ಸಲಾಕೆ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ~ ಎಂದು ಅವರು ಮಾಹಿತಿ ನೀಡಿದರು.

`ಘಟನೆ ಸಂಬಂಧ ಗೋಪಿ ಮತ್ತು ಅರುಣ್‌ಕುಮಾರ್ ಅವರು ದೂರು ಕೊಟ್ಟಿದ್ದಾರೆ. ಭಾರತೀಯ ದಂಡ ಸಂಹಿತೆ ಕಲಂ 307ರ ಅನ್ವಯ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ರೇಸ್ ಕುದುರೆ ಪೋಷಣೆ ಮಾಡುವವರ ಗುಂಪಿನ 25 ಮಂದಿಯನ್ನು ಬಂಧಿಸಲಾಗಿದೆ~ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.