
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ಶುಲ್ಕ ಹೆಚ್ಚಿಸಿರುವುದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲ ಹಳ್ಳಿಗಳ ಕೃಷಿಕರಿಗೆ ಆರ್ಥಿಕವಾಗಿ ಹೊರೆಯಾಗಿದೆ.
ದೇವನಹಳ್ಳಿ ಅಕ್ಕಪಕ್ಕದ ಗ್ರಾಮಗಳ ರೈತರು ತರಕಾರಿ, ಹೂವು, ಹಣ್ಣು ಮತ್ತಿತರ ಕೃಷಿ ಪದಾರ್ಥಗಳನ್ನು ಎನ್‌ಎಚ್–7ರ ಮೂಲಕವೇ ನಗರಕ್ಕೆ ಸಾಗಿಸಿಕೊಂಡು ಬಂದು ಮಾರಾಟ ಮಾಡಬೇಕಿದೆ.
ಟೋಲ್ ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಸಾದರಹಳ್ಳಿ, ದೇವನಹಳ್ಳಿ, ಕನ್ನಮಂಗಲ, ಭುವನಹಳ್ಳಿ, ಎರ್ತಿಗಾನಹಳ್ಳಿ, ಅಣ್ಣೇಶ್ವರ, ಬೊಮ್ಮವಾರ, ವಿಶ್ವನಾಥಪುರ, ಪಾಳ್ಯ ಸೇರಿದಂತೆ ಸುಮಾರು 252 ಹಳ್ಳಿಗಳಿವೆ.
ಆ ಹಳ್ಳಿಗಳ ರೈತರು ಮುಖ್ಯವಾಗಿ ಕ್ಯಾರೆಟ್, ಆಲೂಗೆಡ್ಡೆ, ಬದನೆಕಾಯಿ ಮತ್ತಿತರ ತರಕಾರಿಗಳು ಹಾಗೂ ಸೊಪ್ಪುಗಳನ್ನು ಬೆಳೆಯುತ್ತಾರೆ. ಅಲ್ಲದೆ ಕನಕಾಂಬರ, ಸುಗಂಧರಾಜ, ಮಲ್ಲಿಗೆ ಹೂ ಬೆಳೆಯುವ ಅವರು ಎನ್‌ಎಚ್–7ರಲ್ಲಿ ಪ್ರತಿನಿತ್ಯ ಟೋಲ್ ಶುಲ್ಕ ಪಾವತಿಸಿಯೇ ಕೃಷಿ ಪದಾರ್ಥಗಳನ್ನು ವಾಹನಗಳಲ್ಲಿ ನಗರಕ್ಕೆ ತರುತ್ತಿದ್ದಾರೆ.
ಈ ಹಿಂದೆ ಸರಕು ಸಾಗಣೆ ಟೆಂಪೊಗೆ ಎರಡು ಕಡೆಯ ಪ್ರಯಾಣಕ್ಕೆ ರೂ. 45 ಟೋಲ್ ಶುಲ್ಕವಿತ್ತು. ಇದೀಗ ಶುಲ್ಕದ ಪ್ರಮಾಣ ರೂ. 175ಕ್ಕೆ ಹೆಚ್ಚಳವಾಗಿದೆ. ಈ ಹೊರೆಯನ್ನು ವಾಹನ ಮಾಲೀಕರು ರೈತರ ಮೇಲೆಯೇ ಹೇರುತ್ತಿದ್ದಾರೆ.
‘ಕನ್ನಮಂಗಲದಿಂದ ನಗರದ ಸಿಟಿ ಮಾರುಕಟ್ಟೆಗೆ ಒಂದು ಮೂಟೆ ತರಕಾರಿ ಸರಕಿಗೆ ಟೆಂಪೊ ಮಾಲೀಕರು ಈ ಹಿಂದೆ ರೂ. 30 ಬಾಡಿಗೆ ಪಡೆಯುತ್ತಿದ್ದರು. ಟೋಲ್ ಶುಲ್ಕ ಹೆಚ್ಚಳವಾದ ನಂತರ ರೂ. 40 ಬಾಡಿಗೆ ಕೇಳುತ್ತಿದ್ದಾರೆ’ ಎಂದು ರೈತ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಗಣೆ ವೆಚ್ಚ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ತರಕಾರಿ ಬೆಲೆ ಏರಿಸಲು ಸಾಧ್ಯವಿಲ್ಲ. ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ತರಕಾರಿ ಬೆಲೆ ಹೆಚ್ಚಿಸಿದರೆ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಬೆಲೆ ಹೆಚ್ಚಿಸದಿದ್ದರೆ ಲಾಭದ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.
‘ತುಮಕೂರಿನ ಕ್ಯಾತಸಂದ್ರದಿಂದ ನೆಲಮಂಗಲದವರೆಗಿನ 33 ಕಿ.ಮೀ ದೂರದ ಪ್ರಯಾಣಕ್ಕೆ ಸಣ್ಣ ಸರಕು ಸಾಗಣೆ ವಾಹನಕ್ಕೆ ರೂ. 17 ಟೋಲ್ ಶುಲ್ಕವಿದೆ. ಆದರೆ, ಅದೇ ವಾಹನಕ್ಕೆ ಕೆಐಎಎಲ್ ರಸ್ತೆಯಲ್ಲಿ 22 ಕಿ.ಮೀಗೆ ರೂ. 175 ಟೋಲ್ ಶುಲ್ಕವಿದೆ’ ಎಂದು ಕನ್ನಮಂಗಲದ ಕೃಷಿಕ ತಿಮ್ಮೇಗೌಡ ಹೇಳಿದರು.
‘ಟೋಲ್ ಶುಲ್ಕ ಏರಿಕೆಯಾಗಿರುವುದರಿಂದ ರೈತರಿಗೆ ಹೆಚ್ಚಿನ ಬಾಡಿಗೆ ಕೊಡಿ ಎಂದು ಕೇಳಲು ಆಗುವುದಿಲ್ಲ. ಬಾಡಿಗೆ ಹೆಚ್ಚಿಸಿದರೆ ರೈತರಿಗೆ ತೊಂದರೆಯಾಗುತ್ತದೆ’ ಎಂದು ಟೆಂಪೊ ಮಾಲೀಕ ರಮೇಶ್ ಹೇಳಿದರು.
‘ಕೃಷಿ ಪದಾರ್ಥ ಕೊಂಡೊಯ್ಯುವ ವಾಹನಗಳಿಗೆ ಶುಲ್ಕದಿಂದ ವಿನಾಯಿತಿ ನೀಡಬೇಕು. ರೈತರ ಅನುಕೂಲಕ್ಕಾಗಿ ಟೋಲ್ ರಹಿತ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಸಾದರಹಳ್ಳಿಯ ಲೋಕೇಶ್ ಮನವಿ ಮಾಡಿದರು.
ಪರ್ಯಾಯ ರಸ್ತೆ
‘ಟೋಲ್ ಶುಲ್ಕ ಉಳಿಸುವ ಉದ್ದೇಶಕ್ಕಾಗಿ ಕೆ.ಆರ್.ಪುರ, ರಾಜಾನುಕುಂಟೆ ಅಥವಾ ಹಳ್ಳಿಗಳ ಅಂತರಸಂಪರ್ಕ (ಐವಿಸಿ) ರಸ್ತೆಯ ಮೂಲಕ ನಗರಕ್ಕೆ ಹೋಗಬಹುದು. ಆದರೆ, ಆ ಪರ್ಯಾಯ ರಸ್ತೆಗಳ ಮೂಲಕ ಹೋದರೆ ಸುಮಾರು 30 ಕಿ.ಮೀ ದೂರ ಹೆಚ್ಚು ಕ್ರಮಿಸಬೇಕಾಗುತ್ತದೆ. ಇದರಿಂದ ಇಂಧನ ಹೆಚ್ಚು ವ್ಯಯವಾಗುತ್ತದೆ’ ಎಂದು ಸ್ಥಳೀಯರು ಹೇಳುತ್ತಾರೆ.
ಸರ್ವಿಸ್ ರಸ್ತೆಗೆ ಒಪ್ಪಂದ
ಸಾದರಹಳ್ಳಿ ಟೋಲ್ ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯ ಗ್ರಾಮಗಳ ಜನರ ವಾಹನಗಳ ಓಡಾಟಕ್ಕೆ ಸರ್ವಿಸ್ ರಸ್ತೆ ನಿರ್ಮಿಸಿ ಕೊಡುವುದಾಗಿ ನವಯುಗ ಕಂಪೆನಿಯು ರಸ್ತೆ ನಿರ್ಮಾಣಕ್ಕೂ ಮುನ್ನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು (ಒಪ್ಪಂದದ 27/4ನೇ ನಿಯಮ). ಆ ಒಪ್ಪಂದದಂತೆ ಕಂಪೆನಿಯು ಸರ್ವಿಸ್ ರಸ್ತೆಯನ್ನು ನಿರ್ಮಿಸಿದೆ.
ಆದರೆ, ಸರ್ವಿಸ್ ರಸ್ತೆಯ ನಿರ್ಗಮನ ಭಾಗವನ್ನು ಮುಖ್ಯರಸ್ತೆಗೆ ಸಂಪರ್ಕಿಸಿ ಟೋಲ್ ಕೇಂದ್ರಗಳ ಮೂಲಕವೇ ವಾಹನಗಳು ಹಾದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳ ಮಾಲೀಕರು ಸಹ ಟೋಲ್ ಶುಲ್ಕ ಪಾವತಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.