ADVERTISEMENT

ರೈತರಿಗೆ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 18:50 IST
Last Updated 28 ಅಕ್ಟೋಬರ್ 2011, 18:50 IST

ಯಲಹಂಕ: ಎನ್‌ಟಿಐ ಗೃಹ ನಿರ್ಮಾಣ ಸಂಸ್ಥೆಯು ಬೆಂಗಳೂರು ಉತ್ತರ ತಾಲ್ಲೂಕಿನ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಕೊಡಿಗೇಹಳ್ಳಿ, ಬ್ಯಾಟರಾಯನಪುರ ಹಾಗೂ ಕೋತಿಹೊಸಹಳ್ಳಿ ಗ್ರಾಮಗಳಿಗೆ ಸೇರಿದ ನೂರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಸರಿಯಾದ ಪರಿಹಾರ ನೀಡದೆ ವಂಚಿಸಿದೆ ಎಂದು ದಲಿತ ಮಹಾಸಭಾದ ನಗರ ಘಟಕದ ಅಧ್ಯಕ್ಷ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, `ಸಂಸ್ಥೆಯು 1985-86ರಲ್ಲಿ ಮೇಲ್ಕಂಡ ಗ್ರಾಮಗಳ ನೂರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಲ್ಲಿಯವರೆಗೂ ರೈತರ ಭೂಮಿಗೆ ಯೋಗ್ಯವಾದ ಬೆಲೆ ನೀಡದೆ ಅವರ ಜೀವನದ ಜೊತೆಗೆ ಚಲ್ಲಾಟವಾಡುತ್ತಿದೆ. ಇದನ್ನು ವಿರೋಧಿಸಿ ರೈತರು ನಾಯಾಲಯದ ಮೊರೆ ಹೋಗಿದ್ದು, ಹೈಕೋರ್ಟ್ ರೈತರ ಪರ ತೀರ್ಪು ನೀಡಿದ್ದರೂ ಸಂಸ್ಥೆಯು ತೀರ್ಪನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಪೊಲೀಸ್ ಭದ್ರತೆಯೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದೆ~ ಎಂದು ಆಪಾದಿಸಿದ್ದಾರೆ.

`ಸ್ವಾಧೀನಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಕೂಡಲೇ ಸರಿಯಾದ ಪರಿಹಾರ ನೀಡಬೇಕು. ಇಲ್ಲವೇ ಭೂಮಿಯನ್ನು ರೈತರಿಗೆ ಹಿಂತಿರುಗಿಸಬೇಕು ಹಾಗೂ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು~ ಎಂದು ಆಗ್ರಹಿಸಿ ಈ ತಿಂಗಳ 31ರಂದು ಮುಖ್ಯಮಂತ್ರಿಗಳ ನಿವಾಸ ಎದುರು ಹಾಗೂ ಆನಂದರಾವ್ ವೃತ್ತದ ಬಳಿ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದರು.

ಈ ಹೋರಾಟಕ್ಕೆ ಬೆಂಗಳೂರು ಉತ್ತರ ತಾಲ್ಲೂಕಿನ ಎಲ್ಲ ರೈತರು ಹಾಗೂ ರೈತಪರ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.