ADVERTISEMENT

ರೈತರಿಗೆ ಹಾನಿಯಾಗುವ ಸಂಭವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:40 IST
Last Updated 28 ಫೆಬ್ರುವರಿ 2011, 19:40 IST

ಬೆಂಗಳೂರು: ‘ರಾಜ್ಯ ಸರ್ಕಾರದ ಉದ್ದೇಶಿತ ಜಾಗತಿಕ ಕೃಷಿ ಬಂಡವಾಳ ಹೂಡಿಕೆ ಸಮಾವೇಶ ರೈತನಿಗೆ ಅನುಕೂಲವಾಗುವುದಕ್ಕಿಂತ ಹಾನಿಯಾಗುವ ಸಂಭವವೇ ಹೆಚ್ಚು’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್)ಯ ನಿರ್ದೇಶಕ ಆರ್.ಎಸ್. ದೇಶಪಾಂಡೆ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ವಿದ್ಯಮಾನ ವೇದಿಕೆ ಏರ್ಪಡಿಸಿದ್ದ ‘ಕೃಷಿ ಬಜೆಟ್ ಮತ್ತು ಕರ್ನಾಟಕ ಬಜೆಟ್ 2011’ ಕುರಿತ ವಿಶ್ಲೇಷಣೆ ಮತ್ತು ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿ ರಾಜ್ಯಗಳೂ ತಮ್ಮದೇ ಆದ ಕೃಷಿ ನೀತಿಯನ್ನು ಹೊಂದಬೇಕು. ಕೇಂದ್ರವೂ ಕೂಡ ಈ ಕುರಿತಂತೆ ರಾಷ್ಟ್ರೀಯ ನೀತಿಯೊಂದನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.‘ಮಳೆ ಆಧಾರಿತ ಬೇಸಾಯ ಇರುವಲ್ಲಿ ರಾಜ್ಯ ಸರ್ಕಾರ ‘ಸುವರ್ಣಭೂಮಿ ಯೋಜನೆ’ಯಡಿ ಘೋಷಿಸಿರುವ ರೂ 10,000 ನಗದು ನೀಡುವ ಘೋಷಣೆಯನ್ನು ಪ್ರಸ್ತಾಪಿಸಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಕೆನಡಾ, ಜಪಾನ್, ಯುರೋಪಿಯನ್ ಯೂನಿಯನ್ ಹಾಗೂ ಜರ್ಮನಿಯಲ್ಲೂ ಈ ಕ್ರಮ ಜಾರಿಯಲ್ಲಿದೆ. ಆದರೆ ಭಾರತದಲ್ಲಿ ಈ ಪದ್ಧತಿ ಜಾರಿಗೆ ಬರುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

ಹನಿ ನೀರಾವರಿ ಪದ್ಧತಿ ಪ್ರೋತ್ಸಾಹಿಸಲು ಸರ್ಕಾರ ನೂರು ಕೋಟಿ ರೂಪಾಯಿ ಅನುದಾನ ನೀಡುವ ನಿರ್ಧಾರವನ್ನು ಪ್ರಶಂಸಿಸಿದ ಅವರು, ಅಂತರ್ಜಲ ಮಟ್ಟ ಸಂರಕ್ಷಣಾ ಕಾಯ್ದೆ ಜಾರಿಗೆ ಬರಬೇಕು ಎಂದರು. ವಿದ್ಯಮಾನ ವೇದಿಕೆಯ ಪೋಷಕ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ವೇದಿಕೆ ಅಧ್ಯಕ್ಷ ರಾಜಾ ಶೈಲೇಶ ಚಂದ್ರಗುಪ್ತ ಮತ್ತು ಕಾರ್ಯದರ್ಶಿ ಅಂಜನ್ ಉಪ್ಥತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.