ADVERTISEMENT

ರೈತರ ಬೇಡಿಕೆಗೆ ಓಗೊಡಲು ಕಬ್ಬು ಬೆಳೆಗಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಬೆಂಗಳೂರು: `ಸಂಕಷ್ಟದಲ್ಲಿರುವ ರಾಜ್ಯದ ರೈತರ ಪರವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘವು ನೀಡಲಾಗುವ ಬೇಡಿಕೆಗಳನ್ನು ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಜಾರಿಗೊಳಿಸುವ ಭರವಸೆ ನೀಡಬೇಕು' ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬರಗಾಲದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಬರಪೀಡಿತ ಪ್ರದೇಶದ ಬೆಳೆಗಳಿಗೆ ತಿಂಗಳೊಳಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸೌರಶಕ್ತಿ ಪಂಪ್‌ಸೆಟ್ ಅಳವಡಿಸುವ ರೈತರಿಗೆ ಶೇ 50ರಷ್ಟು ಸಹಾಯಧನ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ 16 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ನೀಡಬೇಕು. ಬೆಲೆ ಕುಸಿದಾಗ ನೆರವಾಗಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿಯಲ್ಲಿ  ರೂ.10 ಕೋಟಿ ಮೀಸಲಿಡಬೇಕು ಎಂದರು. 

ಕಬ್ಬು ಬೆಳೆಗೆ ವಿಮೆ ಜಾರಿ ಮಾಡಬೇಕು. 2011-12, 2012-13ನೇ ಸಾಲಿನಲ್ಲಿ ಬೆಳೆದ ಕಬ್ಬಿಗೆ ಅಂತಿಮ ಬೆಲೆ ನಿಗದಿ ಮಾಡಿ ಬಾಕಿ ಹಣವನ್ನು ಅಧಿಕಾರಕ್ಕೆ ಬಂದ ತಿಂಗಳೊಳಗೆ ಪಾವತಿಸಬೇಕು. ಬರಗಾಲಕ್ಕೆ ತುತ್ತಾಗುವ ಪ್ರದೇಶಗಳ ಕೆರೆಗಳಿಗೆ ಜಲಾಶಯಗಳಿಂದ ನೀರು ತುಂಬಿಸುವ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.